ಜಿಲ್ಲೆ

ಮುಂದುವರಿದ ವಕೀಲರ ಹೋರಾಟ

ಮಂಜುನಾಥ ತಿಮ್ಮಯ್ಯ

ಮೈಸೂರು; ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ಒತ್ತಾಯಿಸಿ ವಕೀಲರು ನಗರದಲ್ಲಿ ಕೈಗೊಂಡಿರುವ ಪ್ರತಿಭಟನೆ ಮುಂದುವರಿಯಿತು.
ನ್ಯಾಯಾಲಯದ ಎದುರು ಧರಣಿ ಕುಳಿತಿರುವ ವಕೀಲರು, ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.


ಕಳೆದ ಹಲವು ದಿನಗಳಿಂದ ವಕೀಲರು ಹೋರಾಟ ನಡೆಸುತ್ತಿದ್ದು, ರಾಜ್ಯ ಸರ್ಕಾರ ಕೇವಲ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಪ್ರಸ್ತಾವನೆ ಮಾಡಿ ಸುಮ್ಮನಾಗಿದೆ. ಇದು ಸರಿಯಲ್ಲ. ಈ ಕೂಡಲೇ ಮಸೂದೆಯನ್ನು ಅಂಗೀಕರಿಸಬೇಕೆಂದು ಒತ್ತಾಯಿಸಿದರು.


ರಾಜ್ಯದಲ್ಲಿ ವಕೀಲರ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಿದ್ದು, ರಕ್ಷಣೆ ಇಲ್ಲದಂತಾಗಿದೆ. ಚಿಕ್ಕಮಗಳೂರಿನಲ್ಲಿ ವಕೀಲರ ಮೇಲೆ ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿ ಅವಮಾನಿಸಿದ್ದಾರೆ. ಹಲ್ಲೆ ನಡೆಸಿದ ಪೊಲೀಸರನ್ನು ಸರ್ಕಾರ ಕೂಡಲೇ ಸೇವೆಯಿಂದ ವಜಾ ಮಾಡಬೇಕು.

ಇದೀಗ ಕಲಬುರಗಿಯಲ್ಲಿ ವಕೀಲರ ಹತ್ಯೆಯಾಗಿದೆ. ಆದ್ದರಿಂದ ಆಗಸ್ಟ್‌ನಲ್ಲಿ ಮೈಸೂರಿನಲ್ಲಿ ನಡೆದ ವಕೀಲರ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಅವರು ಭರವಸೆ ನೀಡಿದಂತೆ ಪ್ರಸಕ್ತ ಅಧಿವೇಶನದಲ್ಲಿ ವಕೀಲರ ಸಂರಕ್ಷಣಾ ಮಸೂದೆಗೆ ಅಂಗೀಕಾರ ಪಡೆದು ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.


ಸಂಘದ ಪದಾಧಿಕಾರಿಗಳಾದ ಎಂ.ಮಹದೇವಸ್ವಾಮಿ, ಪುಟ್ಟಸಿದ್ದೇಗೌಡ, ಎಸ್.ಉಮೇಶ್, ಎಚ್.ಎಸ್.ಮಹದೇವಸ್ವಾಮಿ, ಜಿ.ಎಂ.ನಾಗೇಶ್, ಹಿರಿಯ ವಕೀಲ ಎಚ್.ಎನ್.ವೆಂಕಟೇಶ್, ಬಿ.ಎಸ್.ಭಾಗ್ಯಮ್ಮ, ಎನ್.ಪುನೀತ್, ಶಿವಣ್ಣ ಇನ್ನಿತರರಿದ್ದರು.