ಜಿಲ್ಲೆ

17ನೇ ದಿನಕ್ಕೆ ಕಾಲಿಟ್ಟ ಅತಿಥಿ ಉಪನ್ಯಾಸಕರ ಧರಣಿ: ಸೇವೆ ಕಾಯಂಗೆ ಹೆಚ್ಚಿದ ಒತ್ತಡ

ಕೆ.ಎನ್.ರಾಘವೇಂದ್ರ

ಮಂಡ್ಯ: ಸೇವೆ ಕಾಯಂಗೆ ಆಗ್ರಹಿಸಿ ತರಗತಿ ಬಹಿಷ್ಕರಿಸಿ ಮುಷ್ಕರ ನಡೆಸುತ್ತಿರುವ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಧರಣಿ ಗುರುವಾರ 17ನೇ ದಿನ ಪೂರೈಸಿತು.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಧರಣಿ ಮುಂದುವರೆಸಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಅಧಿಕಾರಕ್ಕೆ ಬರುವ ಮುನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಆದರೆ ಸರ್ಕಾರ ಅಸ್ತಿತ್ವಕ್ಕೆ ಬಂದು ಅರ್ಧ ವರ್ಷ ಕಳೆದರೂ ಅತಿಥಿ ಉಪನ್ಯಾಸಕರ ಸೇವೆ ಖಾಯಂ ಮಾಡಲು ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅತಿಥಿ ಉಪನ್ಯಾಸಕರ ಬೆಂಬಲಕ್ಕೆ ವಿದ್ಯಾರ್ಥಿಗಳು, ಪಾಲಕರು ಹಾಗೂ ವಿವಿಧ ಸಂಘಟನೆಗಳು ನಿಂತಿವೆ. ವಿದ್ಯಾರ್ಥಿಗಳ ಪಾಠ ಪ್ರವಚನಕ್ಕೆ ತೊಂದರೆಯಾಗಿದೆ. ಪರೀಕ್ಷೆ ಇದೇ ತಿಂಗಳು ಆರಂಭಗೊಳ್ಳಲಿದ್ದು, ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಸರ್ಕಾರ ಗಮನಹರಿಸಿ ಆದಷ್ಟು ಶೀಘ್ರ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿದರು.

ಸಂಘದ ಗೌರವಾಧ್ಯಕ್ಷ ಜಿ.ವಿ.ರಮೇಶ್, ಅಧ್ಯಕ್ಷ ಕೆ.ಪರಮೇಶ್, ಉಪಾಧ್ಯಕ್ಷ ಚಲುವರಾಜು, ಮಂಜು, ಮಲ್ಲೇಶ್ ಇತರರಿದ್ದರು.