ವಿಜಯಪುರ ನಗರದ ನೂತನ ಪ್ರವಾಸಿ ಮಂದಿರದಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಸುದ್ದಿಗೋಷ್ಠಿ ನಡೆಸಿದರು.  
ಜಿಲ್ಲೆ

ಇಂಡಿ ಕ್ಷೇತ್ರದಲ್ಲಿ ಮುಂದುವರಿದ ಅಭಿವೃದ್ಧಿ ಪರ್ವ, ಅಂದಾಜು 4257 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ-ಲೋಕಾರ್ಪಣೆ, ಜು. 14ಕ್ಕೆ ಸಿಎಂ-ಡಿಸಿಎಂ ಲಿಂಬೆ ನಾಡಿಗೆ ಆಗಮನ

ವಿಜಯಪುರ: ಚುನಾವಣೆ ಪೂರ್ವ ನೀಡಿದ ಭರವಸೆಗಳ ಪೈಕಿ ಪ್ರಮುಖವಾಗಿರುವ ನೀರಾವರಿ, ಸಣ್ಣ ಕೈಗಾರಿಕೆ, ರಸ್ತೆ ಅಭಿವೃದ್ಧಿ ಹಾಗೂ ಜಿಟಿಟಿಸಿ ಕೇಂದ್ರಗಳ ಸ್ಥಾಪನೆಗೆ ಕ್ರಮ ವಹಿಸಲಾಗಿದ್ದು, ಜು.14 ರಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಅವರು ಶಂಕು ಸ್ಥಾಪನೆ ನೆರವೇರಿಸುವುದರ ಜೊತೆಗೆ ಕೆಲವು ಪ್ರಮುಖ ಕಾಮಗಾರಿಗಳ ಉದ್ಘಾಟನೆ ನೆರವೇರಿಸಲಿದ್ದಾರೆಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ತಿಳಿಸಿದರು.

ಇಂಡಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನೀರಾವರಿ, ರಸ್ತೆ ಅಭಿವೃದ್ಧಿ ಕಾಮಗಾರಿ, ಜಿಟಿಟಿಟಿಸಿ ಸ್ಥಾಪನೆ ಸೇರಿದಂತೆ ಅಂದಾಜು 4257 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ನೀರಾವರಿ ಯೋಜನೆ

ಒಂದು ಕಾಲದಲ್ಲಿ ಬರದಿಂದ ತತ್ತರಿಸಿದ ಇಂಡಿ ಕ್ಷೇತ್ರದಲ್ಲಿ ನೀರಾವರಿ ಒತ್ತಟ್ಟಿಗಿರಲಿ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಇತ್ತು. ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುವ ಸ್ಥಿತಿ ನಿರ್ಮಾಣವಾಗಿತ್ತು. 2001 ರಲ್ಲಿ ಇಂಡಿ ಶಾಖಾ ಕಾಲುವೆ ಮೂಲಕ ನೀರು ಹರಿಸಲಾಯಿತು. 2018-19 ರಲ್ಲಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಬಜೆಟ್‌ನಲ್ಲಿ 500 ಕೋಟಿ ರೂಪಾಯಿ ಮೀಸಲಿರಿಸಾಯಿತು. 2023 ಮಾ.9 ರಂದು ಈ ಯೋಜನೆಗೆ ಅಡಿಗಲ್ಲು ಸ್ಥಾಪಿಸಲಾಯಿತಾದರೂ ಮಾ. 17ಕ್ಕೆ ಕಾರ್ಯಾದೇಶ ನೀಡಲಾಯಿತು. ಆ ಬಳಿಕ ಚುನಾವಣೆ ನೀತಿ ಸಂಹಿತೆ ಜಾರಿಯಾಯಿತು. ನಂತರ ಬಂದ ಕಾಂಗ್ರೆಸ್ ಸರ್ಕಾರ ಅನುದಾನ ಬಿಡುಗಡೆ ಮಾಡಿತು. ಇದೀಗ ಶಂಕು ಸ್ಥಾಪನೆ ನೆರವೇರಿಸಲಾಗುತ್ತಿದೆ ಎಂದರು.

ಇನ್ನು ತಿಡಗುಂದಿ ವಿಸ್ತೃತ ಯೋಜನೆಯಡಿ ಇಂಡಿ ಹಾಗೂ ಚಡಚಣ ತಾಲೂಕಿನ 19 ಕೆರೆ ತುಂಬುವ ಯೋಜನೆ ಲೋಕಾರ್ಪಣೆಗೊಳಿಸಲಾಗುತ್ತಿದೆ. 238 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಈ ಯೋಜನೆಯಿಂದಾಗಿ 28 ಸಾವಿರ ಹೆಕ್ಟೇರ್ ಪ್ರದೇಶ ನೀರಾವರಿ ಸೌಲಭ್ಯಕ್ಕೆ ಒಳಪಡಲಿದೆ. ಭವಿಷ್ಯದಲ್ಲಿ 70 ಸಾವಿರ ಎಕರೆ ನೀರಾವರಿ ಪ್ರದೇಶವಾಗುವ ಮೂಲಕ ಇಂಡಿ ತಾಲೂಕು ಶೇ.80ರಷ್ಟು ನೀರಾವರಿ ಪ್ರದೇಶವಾಗಿ ಹೊರಹೊಮ್ಮಲಿದೆ ಎಂದರು.

ಶೈಕ್ಷಣಿಕ ಕ್ಷೇತ್ರ

ಬಹುದಿನದ ಬೇಡಿಕೆಯಾಗಿದ್ದ ಜಿಟಿಟಿಸಿ ಕೇಂದ್ರಕ್ಕೆ ಭೂಮಿ ಶಂಕು ಸ್ಥಾಪನೆ ನೆರವೇರಿಸಲಾಗುತ್ತಿದೆ. ರಾಜ್ಯದಲ್ಲಿ ತುಮಕೂರು ಜಿಲ್ಲೆಯ ಮಧುಗಿರಿ ಹಾಗೂ ವಿಜಯಪುರ ಜಿಲ್ಲೆಯ ಇಂಡಿಗೆ ಈ ಕೇಂದ್ರ ಮಂಜೂರಾಗಿದ್ದು, ನಬಾರ್ಡ್ ಸಹಯೋಗದಲ್ಲಿ 73 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಇದರಿಂದ ಈ ಭಾಗದ ನಿರುದ್ಯೋಗ ನಿವಾರಣೆಯಾಗಲಿದೆ ಎಂದರು.

ಕರ್ನಾಟಕ ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಝಳಕಿಯಲ್ಲಿ ಡಿಪ್ಲೊಮಾ ಕಾಲೇಜ್ ನಿರ್ಮಿಸಲಾಗಿದ್ದು, ಅದಕ್ಕೆ ಹೆಚ್ಚುವರಿಯಾಗಿ ಕೊಠಡಿ ನಿರ್ಮಾಣ ಮಾಡಲಾಗುತ್ತಿದೆ. ಇಂಡಿ ಪ್ರಥಮ ದರ್ಜೆ ಕಾಲೇಜ್ ಲೋಕಾರ್ಪಣೆ, ತಡವಲಾ ಕೆಜಿಬಿವಿ ಶಾಲಾ ಕಟ್ಟಡದ ಶಂಕು ಸ್ಥಾಪನೆ, ಸಾತಲಗಾಂವ ಸರ್ಕಾರಿ ಪ್ರೌಢ ಶಾಲೆ ಕಟ್ಟಡ ಲೋಕಾರ್ಪಣೆಗೊಳ್ಳಲಿದೆ ಎಂದರು.

ಸೇತುವೆ-ಬಾಂದಾರ್-ರಸ್ತೆ

ಕರ್ನಾಟಕ-ಮಹಾರಾಷ್ಟ್ರ ಗಡಿರೇಖೆಯಾಗಿ ಹರಿಯುವ ಭೀಮಾನದಿಗೆ ಅಡ್ಡಲಾಗಿ ಇಂಡಿಯ ಪಡನೂರ ಮತ್ತು ಅಂಕಲಗಿ ಮಧ್ಯೆ 65 ಕೋಟಿ ರೂಪಾಯಿ ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗುತ್ತಿದೆ. ಇದರಿಂದ ಎರಡೂ ರಾಜ್ಯಗಳ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಚಡಚಣ-ಗಾಣಗಾರಪು ರಸ್ತೆ ಅಭಿವೃದ್ಧಿ, ಇಂಡಿ ರೈಲ್ವೆ ನಿಲ್ದಾಣದಿಂದ ಹಲಸಂಗಿ ರಾಷ್ಟ್ರೀಯ ಹೆದ್ದಾರಿ, ಔರಾದ್ ಸದಾಶಿವಗಡ ರಾಜ್ಯ ಹೆದ್ದಾರಿ ಸುಧಾರಣೆಗಾಗಿ ಶಂಕು ಸ್ಥಾಪನೆ ನೆರವೇರಿಸಲಾಗುತ್ತಿದೆ. ಶಾಸಕರ ಅನುದಾನ, ಪ್ರಗತಿ ಪಥ ಯೋಜನೆ, ಅತೀವೃಷ್ಠಿಯಿಂದ ಹಾನಿಗೊಳಗಾದ ರಸ್ತೆಗಳ ಸುಧಾರಣೆ ಯೋಜನೆಯಡಿ ಗ್ರಾಮೀಣ ಭಾಗದ ರಸ್ತೆಗಳ ಸುಧಾರಣೆಗೆ ಶಂಕು ಸ್ಥಾಪನೆ ನೆರವೇರಿಸಲಾಗುತ್ತಿದೆ. ಇಂಡಿ ನಗರದ ಸುತ್ತ ವರ್ತುಲ ರಸ್ತೆ ಸಹ ನಿರ್ಮಿಸಲಾಗುತ್ತಿದೆ. ಇಂಡಿ ನಗರದಲ್ಲಿ 30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಮೆಗಾ ಮಾರುಕಟ್ಟೆ ಲೋಕಾರ್ಪಣೆಗೊಳ್ಳಲಿದ್ದು, ಅದಕ್ಕೆ ಪೂಜ್ಯ ಸಿದ್ಧೇಶ್ವರ ಶ್ರೀಗಳ ಹೆಸರಿಡಲಾಗಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಡಿ ಸಮುದಾಯ ಭವನಗಳಿಗೆ ಶಂಕುಸ್ಥಾಪನೆ, ಸಣ್ಣ ನೀರಾವರಿ ಇಲಾಖೆಯಿಂದ 13 ಕೋಟಿ ರೂಪಾಯಿ ವೆಚ್ಚದಲ್ಲಿ ಸಣ್ಣ ಬಾಂದಾರ್‌ಗಳ ನಿರ್ಮಾಣಕ್ಕೆ ಶಂಖು ಸ್ಥಾಪನೆ ಹಾಗೂ ಕೆಲವು ಬಾಂದಾರ್‌ಗಳ ಲೋಕಾರ್ಪಣೆಗೊಳಿಸಲಾಗುತ್ತಿದೆ. ಅಂಗನವಾಡಿ ಕಟ್ಟಡಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹೀಗೆ ಅನೇಕ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆಗೊಳಿಸಲಿದ್ದಾರೆಂದು ಶಾಸಕ ಯಶವಂತರಾಯಗೌಡ ಹೆಮ್ಮೆಯಿಂದ ನುಡಿದರು.

ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ಮಾಣದಿಂದ ಹಿಡಿದು ಈವರೆಗೆ ಇಂಡಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗಿದೆ. ವಿಜಯಪುರ ಜಿಲ್ಲೆಯನ್ನು 371 ಜೆ ಅಡಿ ಸೇರ್ಪಡೆಗೊಳಿಸಲು ಶಾಸಕನಾದ ಮೊದಲ ಬಾರಿಯೇ ಸದನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಕೇಳುವ ಮೂಲಕ ಗಮನ ಸೆಳೆದಿದ್ದೇನೆ. ಈ ಭಾಗವನ್ನು 371 ಜೆ ಅಡಿ ಸೇರ್ಪಡೆ ಮಾಡಲು ಈಗಲೂ ಸರ್ಕಾರಕ್ಕೆ ಒತ್ತಾಯ ಮಾಡುವೆ. ಇಂಡಿ ಮಾಡುವ ವಾಗ್ದಾನಕ್ಕೆ ಬದ್ಧನಾಗಿದ್ದೇನೆ ಎಂದರು.