ಸಿಂಧನೂರು ಉಪತಹಸೀಲ್ದಾರ್ ಚಂದ್ರಶೇಖರಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಮನವಿ ಸಲ್ಲಿಸಲಾಯಿತು. ಸಮಿತಿ ತಾಲೂಕು ಅಧ್ಯಕ್ಷ ಮಂಜುನಾಥ ಜಿ., ಪ್ರಧಾನ ಕಾರ್ಯದರ್ಶಿ ಅಯ್ಯಪ್ಪ ಮೇಟಿ, ಉಪಾಧ್ಯಕ್ಷ ಅಶೋಕ, ಯುವ ಘಟಕ ಅಧ್ಯಕ್ಷ ರುದ್ರಗೌಡ, ನಗರ ಘಟಕ ಉಪಾಧ್ಯಕ್ಷ ಶ್ರೀಕಾಂತ ಜವಳಿ ಇತರರಿದ್ದರು.  
ಜಿಲ್ಲೆ

19 ಗ್ರಾಮಗಳನ್ನು ಸಿಂಧನೂರು ತಾಲೂಕಿನಲ್ಲೇ ಮುಂದುವರಿಸಿ

ರುದ್ರಪ್ಪ ವಾಲಿ

ಸಿಂಧನೂರು: ತಾಲೂಕಿನ ಗುಂಜಳ್ಳಿ ಹೋಬಳಿಯ 3 ಹಾಗೂ ತುರ್ವಿಹಾಳ ಹೋಬಳಿಯ 3 ಗ್ರಾಪಂ ವ್ಯಾಪ್ತಿಗೆ ಬರುವ 19 ಗ್ರಾಮಗಳನ್ನು ಮಸ್ಕಿ ತಾಲೂಕಿಗೆ ಸೇರಿಸುವ ಪ್ರಕ್ರಿಯೆ ಕೈಬಿಟ್ಟು, ಈ ಹಿಂದಿನಂತೆ ಎಲ್ಲ ಗ್ರಾಮಗಳನ್ನು ಸಿಂಧನೂರು ತಾಲೂಕಿನಲ್ಲೇ ಯಥಾರೀತಿ ಮುಂದುವರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ತಹಸಿಲ್ ಕಚೇರಿ ಉಪತಹಸೀಲ್ದಾರ್ ಚಂದ್ರಶೇಖರಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಮಸ್ಕಿ ತಾಲೂಕಿನಿಂದ 19 ಗ್ರಾಮಗಳು 40-50 ಕಿ.ಮೀ ಅಂತರದಲ್ಲಿದ್ದು, ಸಾರಿಗೆ ಸಂಪರ್ಕ ಸಮಸ್ಯೆಯಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೀವ್ರ ತೊಂದರೆಯಾಗಲಿದೆ. ಗ್ರಾಮಗಳಿಗೆ ಸಿಂಧನೂರು ತಾಲೂಕು ಕೇಂದ್ರ ಅತ್ಯಂತ ಸಮೀಪದಲ್ಲಿದೆ. ಆಡಳಿತಾತ್ಮಕವಾಗಿ ಹಾಗೂ ಇನ್ನಿತರೆ ಕೆಲಸ ಕಾರ್ಯಗಳನ್ನು ಕೈಗೊಳ್ಳಲು ಜನರಿಗೆ ಬಹಳ ಸುಲಭವಾಗಿದೆ. ಮಸ್ಕಿ ತಾಲೂಕು ಕೇಂದ್ರ ಇನ್ನೂ ಪೂರ್ಣ ಪ್ರಮಾಣದ ಸರ್ಕಾರಿ ಕಚೇರಿಗಳನ್ನು ಹೊಂದಿಲ್ಲ.

ಶೈಕ್ಷಣಿಕವಾಗಿಯೂ ಇನ್ನೂ ಸುಧಾರಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಸಿಂಧನೂರು, ಮಸ್ಕಿ ಕ್ಷೇತ್ರಗಳ ಶಾಸಕರು ವಿನಾ ಕಾರಣ ಗ್ರಾಮಸ್ಥರ ಅಭಿಪ್ರಾಯಕ್ಕೆ ವಿರುದ್ಧವಾಗಿ ಯಾವುದೇ ರೀತಿ ಗೊಂದಲದ ಶಿಫಾರಸು ಮಾಡುವುದನ್ನು ಕೈಬಿಟ್ಟು ಗ್ರಾಮಗಳ ಅಭಿವೃದ್ಧಿಗೆ ಗಮನ ಹರಿಸಬೇಕು ಎಂದು ಮನವಿ ಸಲ್ಲಿಸಲಾಯಿತು.

ಪ್ರಮುಖರಾದ ಯಲ್ಲಪ್ಪ ಕೋಣದ್, ಬಾಲರಾಜ, ವೀರೇಶಗೌಡ, ಗೌಡಪ್ಪ, ಅಮರೇಶ, ನರಸಪ್ಪ, ಬೀರಪ್ಪ, ಹುಲಗಪ್ಪ, ಗೋವಿಂದಪ್ಪ, ಶಿವಲಿಂಗಪ್ಪ ವಡ್ಡರ್, ಶಿವಪ್ಪ ಕಬ್ಬೇರ್, ಹನುಮಂತ, ಈಶಪ್ಪಗೌಡ, ಸತ್ಯಪ್ಪ ಇತರರಿದ್ದರು.