ಆಲಮೇಲ: ಋಷಿಮುನಿಗಳು ಜಗತ್ತಿಗೆ ಸ್ಪೂರ್ತಿಯಾದ ಯೋಗ ಕಲೆಯನ್ನು ಭಾರತೀಯರಿಗೆ ಕೊಡುಗೆಯಾಗಿ ನೀಡಿದ್ದು ಹೆಮ್ಮೆಯ ವಿಷಯವಾಗಿದೆ ಎಂದು ವೈದ್ಯೆ ಡಾ.ಶಾರದಾ ಪಾಟೀಲ ಹೇಳಿದರು.
ಪಟ್ಟಣದ ಸಿಂದಗಿ ರಸ್ತೆಯ ಯುಕೆಪಿ ಕ್ಯಾಂಪ್ ಆವರಣದಲ್ಲಿ ಯೋಗೋತ್ಸವ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಯೋಗ ಉಚಿತ ಶಿಬಿರದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗುರುವಿಲ್ಲದ ಕಾರ್ಯ ಯಾವುದೂ ಸಾರ್ಥಕವಾಗುವದಿಲ್ಲ. ಪ್ರತಿಯೊಂದಕ್ಕೂ ಗುರು ಬೇಕಾಗಿದ್ದು, ಭಾರತ ಜಗತ್ತಿಗೆ ಗುರುವಿನ ಸ್ಥಾನದಲ್ಲಿದೆ. ಯೋಗ, ಪ್ರಾಣಾಯಾಮ, ಧ್ಯಾನ ಜಗತ್ತಿಗೆ ಉತ್ತಮ ಆರೋಗ್ಯದ ಕವಚವಾಗಿದೆ. ಯೋಗಮಯ ಜೀವನವನ್ನು ನಾವು ಮುಂದುವರಿಸಿಕೊಂಡು ಹೋಗಬೇಕು. ಭಾರತದ ಯೋಗ ಪದ್ಧತಿಯನ್ನು ಜಗತ್ತೇ ಅಳವಡಿಸಿಕೊಳ್ಳುತ್ತಿರುವಾಗ ನಮ್ಮ ಯುವ ಜನಾಂಗ ವಿದೇಶಿ ಸಂಸ್ಕೃತಿಯ ಜಿಮ್‌ಗೆ ಮೊರೆ ಹೋಗುತ್ತಿರುವುದು ವಿಪರ‌್ಯಾಸವಾಗಿದೆ. ಒತ್ತಡ ರಹಿತ ಜೀವನಕ್ಕಾಗಿ ಯೋಗವನ್ನು ಪ್ರತಿದಿನ ಮಾಡಬೇಕು ಎಂದರು.
ಯೋಗ ಶಿಕ್ಷಕಿ ಪ್ರಭಾವತಿ ಮೇತ್ರಿ ಮಾತನಾಡಿ, ಯೋಗ, ಪ್ರಾಣಾಯಾಮ ದೇಹಕ್ಕೆ ಶಕ್ತಿ ನೀಡಿದರೆ ಅಧ್ಯಾತ್ಮ ಪ್ರವಚನ ಮಾನಸಿಕ ನೆಮ್ಮದಿ ನೀಡುತ್ತದೆ ಎಂದು ಹೇಳಿದರು. ಡಾ.ಮಂಜುಷಾ ಪಾಟೀಲ ಮಾತನಾಡಿದರು. ಹಿಮಾಲಯದ ಯೋಗಗುರು ನಿರಂಜನ ಶ್ರೀಗಳು ಯೋಗೋತ್ಸವಕ್ಕೆ ಚಾಲನೆ ನೀಡಿದರು.
ಯೊಗೋತ್ಸವ ಸಮಿತಿಯ ಮುಖಂಡರಾದ ಡಾ.ಶ್ರೀಶೈಲ ಪಾಟೀಲ, ಕಸಾಪ ಅಧ್ಯಕ್ಷ ಶಿವಶರಣ ಗುಂದಗಿ, ಶ್ರೀಶೈಲ ಮಠಪತಿ, ಎನ್.ಎ.ಬಿರಾದಾರ, ಡಾ.ಚನ್ನಬಸು ನಿಂಬಾಳ, ಡಾ.ರಾಜೇಶ ಪಾಟೀಲ, ಶೇಷಾದ್ರಿ ಜ್ಯೋಶಿ, ಅಶೋಕ ಸದ್ಲಾಪುರ ಇತರರಿದ್ದರು.