ವಿಜಯವಾಣಿ ಸುದ್ದಿಜಾಲ ಧಾರವಾಡ
ಇಡೀ ವಿಶ್ವವೇ ಬೆರಗಾಗುವಂತೆ ಕಲ್ಲನ್ನು ಹೂವಾಗಿ ಅರಳಿಸಿದ್ದ ಅಮರಶಿಲ್ಪಿ ಜಕಣಾಚಾರಿ ಬೇಲೂರು, ಹಳೇಬೀಡು ದೇವಾಲಯಗಳಿಗೆ ವಿಶ್ವ ಭೂಪಟದಲ್ಲಿ ಶಾಶ್ವತ ಸ್ಥಾನ ಸಂಪಾದಿಸಿಕೊಟ್ಟಿದ್ದಾರೆ ಎಂದು ಸಾಹಿತಿ ಈರಣ್ಣ ಬಡಿಗೇರ ಹೇಳಿದರು.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಧಾರವಾಡ ಜಿಲ್ಲೆಯ ವಿಶ್ವಕರ್ಮ ಸಮಾಜದ ಸಂಘ ಸಂಸ್ಥೆಯ ಸಹಕಾರದಲ್ಲಿ ನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡಿದರು.
ಇಂದಿನ ವಿಶ್ವಕರ್ಮ ಸಮುದಾಯ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ತಮ್ಮ ಕೌಶಲ ಕಣ್ಮರೆಯಾಗದಂತೆ ಶಿಲ್ಪಕಲೆಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಮರಶಿಲ್ಪಿ ಜಕಣಾಚಾರಿಯವರ ಬದುಕಿನ ಮಹತ್ವ ಮತ್ತು ಅವರ ಕೊಡುಗೆ ಸ್ಮರಿಸಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಶ್ರೀ ಮೌನೇಶ್ವರ ಧರ್ಮನಿಧಿ ಸಂಸ್ಥೆ ಅಧ್ಯಕ್ಷ ಮಹಾರುದ್ರ ಬಡಿಗೇರ, ಸಮುದಾಯದ ಮುಖಂಡರಾದ ವಿಠ್ಠಲ ಕಮ್ಮಾರ, ವಸಂತ ಅರ್ಕಾಚರ, ಶಿವಣ್ಣ ಬಡಿಗೇರ, ಸಂತೋಷ ಬಡಿಗೇರ, ಇತರರು ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಆರತಿ ದೇವಶಿಖಾಮಣಿ ವಂದಿಸಿದರು.