ಜಿಲ್ಲೆ

ಅನಂತಸ್ವಾಮಿ ಸಂಗೀತ ಪರಂಪರೆ ಮುಂದುವರಿಸಿ: ವೈ.ಕೆ. ಮುದ್ದುಕೃಷ್ಣ ಸಲಹೆ

ಆರ್.ಕೃಷ್ಣ

ಮೈಸೂರು: ಮೈಸೂರು ಅನಂತಸ್ವಾಮಿ ಹಾಗೂ ರಾಜು ಅನಂತಸ್ವಾಮಿ ಅವರ ಪರಂಪರೆಯನ್ನು ಮೈಸೂರಿಗರು ಮುಂದುವರಿಸಿಕೊಂಡು ಹೋಗಬೇಕು ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಹೇಳಿದರು.

ಕುವೆಂಪುನಗರದ ವೀಣೆ ಶೇಷಣ್ಣ ಭವನದಲ್ಲಿ ಶನಿವಾರ ಆಯೋಜಿಸಿದ್ದ ನಿತಿನ್ಸ್ ನಾದಾಮೃತ ಸ್ಕೂಲ್ ಆಫ್ ಮ್ಯೂಸಿಕ್ 11ನೇ ವಾರ್ಷಿಕೋತ್ಸವ, 6ನೇ ರಾಜು ಗಾನಲಹರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜು ಅನಂತಸ್ವಾಮಿ ಬಗ್ಗೆ ಮಾತನಾಡುವಾಗ ಭಾವುಕನಾಗುತ್ತೇನೆ. ಆತ ಸಂಗೀತದಲ್ಲಿ ಶಿಸ್ತಿಗೆ ಹೆಸರಾಗಿದ್ದ. ಆದರೆ ಜೀವನ ಕ್ರಮದಲ್ಲಿ ಶಿಸ್ತು ಇರಲಿಲ್ಲ ಎಂದು ನೆನೆದರು. ಮೈಸೂರು ಅನಂತಸ್ವಾಮಿ, ರಾಜು ಅನಂತಸ್ವಾಮಿ ಅವರು ಸುಗಮ ಸಂಗೀತದ ಪರಂಪರೆಯನ್ನು ಬಹು ಎತ್ತರಕ್ಕೆ ಕೊಂಡೊಯ್ದರು. ಆ ಪರಂಪರೆಯನ್ನು ಮೈಸೂರಿಗರು ಮುಂದುವರಿಸಿಕೊಂಡು ಹೋಗಬೇಕು. ಯುವ ಪ್ರತಿಭೆ ನಿತಿನ್ ರಾಜಾರಾಂ ಶಾಸ್ತ್ರಿ ಮುಂದುವರಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ಸೂಚಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಧ್ವನಿ ಫೌಂಡೇಷನ್ಸ್ ಸಂಸ್ಥಾಪಕಿ ಡಾ. ಶ್ವೇತಾ ಮಡಪ್ಪಾಡಿ ಮಾತನಾಡಿ, ನಿತಿನ್ ಸುಗಮ ಸಂಗೀತದ ಜತೆಗೆ ಇತರೆ ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಳ್ಳಬೇಕು. ಅದರಲ್ಲೂ ಸುಗಮ ಸಂಗೀತ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ಗಾಯಕಿ ಶ್ರೀರಕ್ಷಾ ಪ್ರಿಯರಾಮ್ ಮಾತನಾಡಿ, ಎಂಎಸ್‌ಐಎಲ್ ಸ್ಪರ್ಧೆಯಿಂದ ಈ ಹಂತದವರೆಗೆ ನಿತಿನ್ ಬೆಳೆದಿದ್ದಾರೆ. ಅವರು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ನಾಗರಾಜ ವಿ. ಭೈರಿ ಮಾತನಾಡಿ, ನಿತಿನ್ ಹೊಸ ಹೊಸ ಪ್ರಯೋಗ ಗಳನ್ನು ಮಾಡುತ್ತಿದ್ದಾರೆ. ಅವರ ನೇತೃತ್ವದಲ್ಲಿ ಇತ್ತೀಚೆಗೆ ನಾದಬ್ರಹ್ಮದಲ್ಲಿ ನಡೆಸಿದ ಅನಂತಯಾನ- ಅಶ್ವತ್ಥಗಾನ ಕಾರ್ಯಕ್ರಮ ಭಾರಿ ಮನ್ನಣೆ ಗಳಿಸಿತು. ತನ್ನ ಸುಗಮ ಸಂಗೀತ ಚಟುವಟಿಕೆಗಳಿಂದಲೇ ಅಪಾರವಾದ ಅಭಿಮಾನ ಬಳಗ ಸಂಪಾದಿಸಿದ್ದಾರೆ ಎಂದರು.

ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ವಿಶೇಷ ಆಹ್ವಾನಿತರಾಗಿದ್ದರು. ಖ್ಯಾತ ಗಾಯಕರಾದ ಬಿ.ವಿ. ಶ್ರೀನಿವಾಸ್, ನಾಗಚಂದ್ರಿಕಾ ಭಟ್, ನಿತಿನ್ ರಾಜಾರಾಂ ಶಾಸ್ತ್ರಿ, ಸಿ.ಎಂ. ನರಸಿಂಹಮೂರ್ತಿ,ಜಿ.ಎನ್. ಮಂಜುನಾಥ್, ಅಮೃತಾ ನಿತಿನ್ ಇತರರು ಇದ್ದರು.

ಇದೇ ಸಂದರ್ಭದಲ್ಲಿ ಖ್ಯಾತ ಗಾಯಕಿ ಶುಭಾ ರಾಘವೇಂದ್ರ ಅವರಿಗೆ ಅನಂತಸ್ವಾಮಿ ಗಾನರತ್ನ, ಪಂಡಿತ ಭೀಮಾ ಶಂಕರ್ ಬಿದನೂರು ಅವರಿಗೆ ರಾಜು ನಾದರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬಳಿಕ ಮೈಸೂರು ಅನಂತಸ್ವಾಮಿ ಹಾಗೂ ರಾಜು ಅನಂತಸ್ವಾಮಿ ಅವರ ಸಂಯೋಜನೆಯ ಗೀತೆಗಳನ್ನು ವಿದ್ಯಾಲಯದ ವಿದ್ಯಾರ್ಥಿಗಳು, ಅತಿಥಿ ಗಾಯಕರು ಹಾಡಿದರು. ಪುರುಷೋತ್ತಮ ಕಿರಗಸೂರು- ಕೀ ಬೋರ್ಡ್ , ಪ್ರದೀಪ್ ಕಿಣ್ಗಾಲ್- ಗಿಟಾರ್, ಭೀಮಾಶಂಕರ ಬಿದನೂರು- ತಬಲ, ವಿನಯ್ ರಂಗಧೋಳ್- ರಿದಂ ಪ್ಯಾಡ್ ಸಾಥ್ ನೀಡಿದರು.