ಉಡುಪಿ: ರಾಜ್ಯಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಡ ಜನರ ಹಸಿವನ್ನು ನೀಗಿಸುತ್ತಿದ್ದು, ಯಥಾಸ್ಥಿತಿ ಮುಂದುವರಿಯಲಿದೆ. ಪರಿಷ್ಕರಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಕತ್ತರಿ ಹಾಕುವುದಿಲ್ಲ. ಗ್ಯಾರಂಟಿ ಯೋಜನೆಗಳ ಬಗ್ಗೆ ಯಾರೂ ಅನ್ಯತಾ ವ್ಯಾಖ್ಯಾನಿಸಬಾರದು. ಸಚಿವ ಸಂಪುಟ ಸಭೆಯಲ್ಲಿ ಗ್ಯಾರಂಟಿ ಯೋಜನೆ ಮುಂದುವರಿಯಬೇಕು ಎಂಬುದು ಎಲ್ಲರ ಧ್ವನಿ. ಚುನಾವಣೆಗಾಗಿ ಸ್ವಾರ್ಥದ ರಾಜಕಾರಣಕ್ಕೆ ಗ್ಯಾರಂಟಿ ಯೋಜನೆ ಜಾರಿಗೆ ತಂದಿಲ್ಲ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 200 ಕೋಟಿ ರೂ. ಹಾನಿ
ಮಳೆಯಿಂದಾಗಿ ಉಡುಪಿ ಜಿಲ್ಲೆಯಲ್ಲಿ 200 ಕೋಟಿ ರೂ. ಹಾನಿಯಾಗಿದೆ. ಜಿಲ್ಲೆಯಲ್ಲಿ ವಾಡಿಕೆ ಗಿಂತ ಶೇ. 41ರಷ್ಟು ಹೆಚ್ಚು ಮಳೆಯಾಗಿದೆ. ಜಿಲ್ಲಾಡಳಿತದ ಬಳಿ ಇರುವ ಅನುದಾನದಲ್ಲಿ ಹಣ ಬಿಡುಗಡೆ ಮಾಡಿದ್ದೇವೆ. ವಿಶೇಷ ಅನುದಾನಕ್ಕಾಗಿ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ ಎಂದು ಹೇಳಿದರು.
ಜಿಲ್ಲೆಗೆ 900 ಕೋಟಿ ರೂ.
ಅಭಿವೃದ್ಧಿಯೆಂದರೆ ಆಶ್ರಯ, ಅಭಿವೃದ್ಧಿ ಎಂದರೆ ಅಕ್ಷರ, ಅಭಿವೃದ್ಧಿ ಅಂದರೆ ಆರೋಗ್ಯ, ಅನ್ನಭಾಗ್ಯ, ಆರ್ಥಿಕ ಸಬಲೀಕರಣ. ಕಳೆದ ಒಂದು ವರ್ಷದಲ್ಲಿ ವಿವಿಧ ಗ್ಯಾರೆಂಟಿ ಯೋಜನೆಗಳಿಗಾಗಿ ಉಡುಪಿ ಜಿಲ್ಲೆಗೆ 900 ಕೋಟಿ ರೂ. ಹಣ ಬಿಡುಗಡೆಯಾಗಿದೆ. ಅಭಿವೃದ್ಧಿ ಅಂದರೆ ಬರಿ ರಸ್ತೆ ಮಾಡುವುದಲ್ಲ.
ವಿರೋಧ ಪಕ್ಷದವರಿಗೆ ಕೆಲಸ ಇಲ್ಲ. ಭ್ರಮನಿರಸನಗೊಂಡಿದ್ದಾರೆ ಎಂದರು.
ದೇವರ ಹೆಸರಲ್ಲಿ ಶಾಸಕ ಸುನಿಲ್ ಕುಮಾರ್ ರಾಜಕೀಯ
ದೇವರ ಹೆಸರಿನಲ್ಲಿ ರಾಜಕೀಯ ಮಾಡಿಕೊಂಡು ಬರುತ್ತಿರುವ ಕಾರ್ಕಳದ ಶಾಸಕ ಸುನಿಲ್ ಕುಮಾರ್, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಮೋಸ ಮಾಡಿದ್ದಾರೆ. ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರು ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬ ಭಾವನೆಯಲ್ಲಿದ್ದಾರೆ. ಮೂರ್ತಿ ಕಂಚಿನದ್ದೋ ಅಥವಾ ಫೈಬರಿನದ್ದೊ ಎಂಬುದು ಜಗಜ್ಜಾಹಿರಾಗಿದೆ. ಬಿಜೆಪಿ ಆಡಳಿತದ ಕೊನೆಯ ಕ್ಯಾಬಿನೆಟ್ ಸಭೆಯಲ್ಲಿ ಗೋಮಾಳದಲ್ಲಿ ಪರಶುರಾಮನ ಮೂರ್ತಿ ಸ್ಥಾಪನೆ ಮಾಡಬಾರದು ಎಂದು ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ ಮೂರ್ತಿ ಕಾಮಗಾರಿ ಮುಂದುವರಿಸಬೇಕು ಎಂಬುದು ನಮ್ಮ ಆಶಯ. ಮೂರ್ತಿಯನ್ನು ಪೂರ್ಣಗೊಳಿಸಲು ಸಿಎಂ ಒಪ್ಪಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಬೈಂದೂರು ಶಾಸಕರ ವಿರುದ್ಧ ಅಸಮಾಧಾನ
ಬೈಂದೂರಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಜಟಾಪಟಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಹಕ್ಕುಚ್ಯುತಿ ಎಂದರೇನು ಎಂಬುದು ಎರಡು ಬಾರಿ ಶಾಸಕಿಯಾದ ನನಗೂ ಗೊತ್ತು. ಶಾಸಕರ ಹಕ್ಕನ್ನ ಕಸಿದುಕೊಳ್ಳಲು ಸಾಧ್ಯವಿಲ್ಲ. ಅಧಿಕಾರಿಗಳ ಸಭೆ ಕರೆಯಲು ನಿಗದಿತ ಸ್ಥಳವಿದೆ. ಖಾಸಗಿ ಸ್ಥಳದಲ್ಲಿ ಅಧಿಕಾರಿಗಳನ್ನು ಸಭೆಗೆ ಕರೆದರೆ ತೊಂದರೆಯಾಗುತ್ತದೆ. ಸರ್ಕಾರಿ ಕಾರ್ಯಕ್ರಮಗಳು ಸರ್ಕಾರಿ ಕಚೇರಿಯಲ್ಲಿ ಪ್ರೊಟೋಕಾಲ್ ಪ್ರಕಾರ ನಡೆಯುತ್ತದೆ ಎಂದರು.
ಟೋಲ್ ಗೇಟ್ ಸಮಸ್ಯೆಗೆ ಶೀಘ್ರ ಪರಿಹಾರ
ಕಂಚಿನಡ್ಕ ಬಳಿ ಟೋಲ್ ಗೇಟ್ಗೆ ವಿರೋಧ ವ್ಯಕ್ತವಾಗಿರುವ ಬಗ್ಗೆ ಮಾಹಿತಿ ಬಂದಿದ್ದು, 4 ಕಿಲೋಮೀಟರ್ ನಲ್ಲಿ ಎರಡು ಟೋಲ್ ಗೇಟ್ ಬಂದಿರುವ ಬಗ್ಗೆ ಬಹಳ ಚರ್ಚೆಯಾಗುತ್ತಿದೆ. ಜಿಲ್ಲಾಧಿಕಾರಿ, ಎಸ್ಪಿ, ಇತರ ಅಧಿಕಾರಿಗಳ ಜೊತೆ ನಾನು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸುತ್ತೇನೆ. ಎರಡು ಕಡೆ ಸುಂಕ ಕೊಡುವುದು ಜನರಿಗೆ ಸಮಸ್ಯೆಯಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿದರು.