ಜಿಲ್ಲೆ

ವಿವಾದಕ್ಕೆ ಕಾರಣವಾದ ನಾಮಫಲಕ ತೆರವು

ಲಲಾಟಾಕ್ಷ ಎಸ್

ಮಳವಳ್ಳಿ: ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಅಳವಡಿಸಲಾಗಿದ್ದ ನಾಮಫಲಕವನ್ನು ಬುಧವಾರ ರಾತ್ರಿ ತೆರವುಗೊಳಿಸುವ ಮೂಲಕ ಹೊಸದೊಂದು ವಿವಾದಕ್ಕೆ ತಾಲೂಕು ಆಡಳಿತ ಗುರಿಯಾಗಿದೆ.
60 ಲಕ್ಷ ರೂ. ವೆಚ್ಚದಲ್ಲಿ ಭವನ ನಿರ್ಮಾಣಕ್ಕೆ 2007ರಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಅಂದು ಡಾ.ಕೆ.ಅನ್ನದಾನಿ ಶಾಸಕರಾಗಿದ್ದರು.


ನಂತರ 2012 ರಲ್ಲಿ ಸಿಎಂ ಆಗಿದ್ದ ಸದಾನಂದಗೌಡರ ಅವಧಿಯಲ್ಲಿ ಕ್ಷೇತ್ರದ ಶಾಸಕರಾಗಿದ್ದ ಪಿ.ಎಂ.ನರೇಂದ್ರಸ್ವಾಮಿ ಭವನ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿಸಿ ಮರು ಶಂಕುಸ್ಥಾಪನೆ ಮಾಡಿಸಿದ್ದರು. ಇವರ ಅವಧಿಯಲ್ಲೇ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆಯನ್ನೂ ಮಾಡಿಸುವುದರ ಜತೆಗೆ ನರೇಂದ್ರಸ್ವಾಮಿ ಅವಧಿಯ ಶಂಕುಸ್ಥಾಪನೆಯ ಫಲಕವನ್ನಷ್ಟೇ ಭವನದ ಮುಖ್ಯದ್ವಾರದಲ್ಲಿ ಅಳವಡಿಸಲಾಗಿತ್ತು. ಬಳಿಕ 2108ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಡಾ.ಕೆ.ಅನ್ನದಾನಿ ಶಾಸಕರಾಗಿ ಅಧಿಕಾರಕ್ಕೆ ಬಂದಾಗ ಭವನದ ಮೂಲೆಯಲ್ಲಿ ಬಿದ್ದಿದ್ದ ಎಚ್.ಡಿ. ಕುಮಾರಸ್ವಾಮಿ ನೆರವೇರಿಸಿದ್ದ ಶಂಕುಸ್ಥಾಪನೆ ಫಲಕವನ್ನು ಅಧಿಕಾರಿಗಳಿಗೆ ಸೂಚಿಸಿ ಮತ್ತೊಂದು ಭಾಗದಲ್ಲಿ ಅಳವಡಿಸಲಾಗಿತ್ತು. ಮತ್ತೊಂದು ಶಂಕುಸ್ಥಾಪನೆ ಫಲಕ ಅಳವಡಿಸಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಭವನ ನಿರ್ಮಾಣಕ್ಕೆ ಸ್ಥಳ ನಿಗದಿಪಡಿಸಿ ಅನುದಾನ ಬಿಡುಗಡೆ ಮಾಡಿಸಿ ಮೊದಲು ಶಂಕುಸ್ಥಾಪನೆ ಮಾಡಿರುವುದು ನಮ್ಮ ಅವಧಿಯಲ್ಲಾದ್ದರಿಂದ ಹಳೆಯ ಫಲಕವನ್ನೇ ಅಳವಡಿಸಲಾಗಿದೆ ಎಂದು ಅಂದಿನ ಶಾಸಕ ಅನ್ನದಾನಿ ಸಮರ್ಥಿಸಿಕೊಂಡಿದ್ದರು.


ಇದೀಗ ಬುಧವಾರ ರಾತ್ರೋರಾತ್ರಿ ಎಚ್.ಡಿ.ಕುಮಾರಸ್ವಾಮಿ ಹೆಸರಿದ್ದ ಫಲಕವನ್ನು ತೆರವುಗೊಳಿಸಿರುವುದು ರಾಜಕೀಯ ತಿಕ್ಕಾಟಕ್ಕೆ ಎಡೆಮಾಡಿಕೊಟ್ಟಿದೆ. ಫಲಕ ತೆರವಿನ ವಿಚಾರವಾಗಿ ಸಮಾಜ ಕಲ್ಯಾಣಾಧಿಕಾರಿ ಜನಾರ್ದನ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೆ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ತಹಸೀಲ್ದಾರ್ ಲೋಕೇಶ್ ಫಲಕ ತೆರವಾಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಪರಿಶೀಲಿಸಲಾಗುವುದು ಎಂದು ‘ವಿಜಯವಾಣಿ’ಗೆ ತಿಳಿಸಿದರು.


ಅಹೋರಾತ್ರಿ ಧರಣಿಗೆ ಸಿದ್ಧತೆ:
ಫಲಕ ತೆರವುಗೊಳಿಸಿರುವುದನ್ನು ಖಂಡಿಸಿ ಹಾಗೂ ಫಲಕವನ್ನು ಮತ್ತೆ ಅಳವಡಿಸಬೇಕೆಂದು ಆಗ್ರಹಿಸಿ ನ.3 ರಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ನೇತೃತ್ವದಲ್ಲಿ ಅಂಬೇಡ್ಕರ್ ಭವನದ ಎದುರು ಅಹೋರಾತ್ರಿ ಧರಣಿ ನಡೆಸಲು ಜೆಡಿಎಸ್ ತೀರ್ಮಾನಿಸಿದೆ.
ಪ್ರತಿಭಟನೆಗೆ ಅನುಮತಿ ಕೋರಿ ಜೆಡಿಎಸ್ ತಾಲೂಕು ಎಸ್ಸಿ/ಎಸ್ಟಿ ಘಟಕದ ಕಾರ್ಯಾಧ್ಯಕ್ಷ ಕಾಂತರಾಜು ಪಟ್ಟಣ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದಾರೆ. ಅಲ್ಲದೆ, ಪ್ರತಿಭಟನೆಯಲ್ಲಿ ಕಾರ್ಯಕರ್ತರು ಪಾಲ್ಗೊಳ್ಳುವಂತೆ ತಾಲೂಕು ಘಟಕದ ಅಧ್ಯಕ್ಷ ವಿ.ಎಂ.ವಿಶ್ವನಾಥ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.