ಹುಬ್ಬಳ್ಳಿ:ನಗರದ ಗಿರಣಿಚಾಳ 4ನೇ ಕ್ರಾಸ್ನಲ್ಲಿ ಶನಿವಾರ ಬೆಳಗ್ಗೆ ನಲ್ಲಿ ಮೂಲಕ ಕಲುಷಿತ ನೀರು ಪೂರೈಕೆಯಾಗಿದ್ದು, ನಿವಾಸಿಗಳು ದಂಗಾಗಿದ್ದಾರೆ.
ಈ ಬಡಾವಣೆಗೆ ಪ್ರತಿ ವಾರಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಹಿಂದಿನ 3-4 ವಾರ ರಾಡಿ ನೀರು ಪೂರೈಕೆಯಾಗಿದ್ದವು. ಇಂದು ಇನ್ನಷ್ಟು ಕೊಳಕಾದ, ಕೆಟ್ಟ ವಾಸನೆಯ, ಕಪ್ಪು ವರ್ಣದ ನೀರು ಪೂರೈಕೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಇಲ್ಲಿ 40-45 ವರ್ಷಗಳ ಹಿಂದೆ ಅಳವಡಿಸಿದ ಒಳಚರಂಡಿ ಮಾರ್ಗವಿದ್ದು, ತುಂಬ ದುರ್ಬಲಗೊಂಡಿದೆ. ಒಳಚರಂಡಿ ಮಾರ್ಗದ ಕೊಳಚೆ, ಕುಡಿಯುವ ನೀರಿನೊಂದಿಗೆ ಸೇರ್ಪಡೆಯಾಗಿದೆ. ಈ ಬಗ್ಗೆ ಹಿಂದೆ ಪಾಲಿಕೆ (ವಲಯ ಕಚೇರಿ ನಂ. 9) ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಅವರಿಂದ ಯಾವುದೇ ರೀತಿ ಸ್ಪಂದನೆ ವ್ಯಕ್ತವಾಗಿಲ್ಲ ಎಂದು ಸ್ಥಳೀಯರಾದ ಚಂದ್ರಶೇಖರ ಯಾತಗೇರಿ ಆರೋಪಿಸಿದ್ದಾರೆ.