ಜಿಲ್ಲೆ

ಗ್ರಾಹಕರಿಗೆ ತೂಕದಲ್ಲಿ ಧೋಖಾ

Haveri

ರಾಣೆಬೆನ್ನೂರ: ಹಾವೇರಿ ಜಿಲ್ಲೆಯಲ್ಲಿ ರಾಣೆಬೆನ್ನೂರ ವ್ಯಾಪಾರ, ವಹಿವಾಟಿಗೆ ಹೆಸರುವಾಸಿಯಾಗಿದೆ. ಆದರೆ, ನಗರದ ಮಾರುಕಟ್ಟೆಗಳಲ್ಲಿ ತೂಕ ಮತ್ತು ಅಳತೆಯಲ್ಲಿ ನಿತ್ಯವೂ ಗ್ರಾಹಕರಿಗೆ ಅನ್ಯಾಯವಾಗುತ್ತಿದೆ.

ನೆಹರು ತರಕಾರಿ ಮಾರುಕಟ್ಟೆ, ದೊಟ್ಟಪೇಟೆ ಮಾರುಕಟ್ಟೆ ಮುಖ್ಯವಾಗಿದೆ. ನಿತ್ಯವೂ ಇಲ್ಲಿಗೆ ಸಾವಿರಾರು ಜನರು ಬಂದು ಹಣ್ಣು, ತರಕಾರಿ, ಗಡ್ಡೆ, ಗೆಣಸು ಸೇರಿ ಇತರ ವಸ್ತುಗಳನ್ನು ಖರೀದಿಸುತ್ತಾರೆ. ವ್ಯಾಪಾರಸ್ಥರು ಗ್ರಾಹಕರಿಗೆ ಇಲೆಕ್ಟ್ರಾನಿಕ್ ಯಂತ್ರದ ತೂಕ ಬಳಸಿ ವಸ್ತುಗಳನ್ನು ಮಾರಾಟ ಮಾಡಬೇಕು. ಆದರೆ, ಅನೇಕರು ಯಂತ್ರದಿಂದ ತೂಕ ಮಾಡುತ್ತಿಲ್ಲ. ಬದಲಾಗಿ ಕಲ್ಲಿನ ತಕ್ಕಡಿ ಬಳಸುತ್ತಿದ್ದಾರೆ. ಸರ್ಕಾರದಿಂದ ಮುದ್ರಿತಗೊಂಡ ತೂಕದ ಕಲ್ಲಿನ ಬದಲು ಇತರ ಕಲ್ಲುಗಳನ್ನು, ಇನ್ನೂ ಕೆಲವರು ಹಣ್ಣು, ಬಟ್ಟೆ ಸುತ್ತಿದ ವಸ್ತು ಇಟ್ಟು ತೂಕ ಮಾಡಿ ಕೊಡುತ್ತಿದ್ದಾರೆ.

ತಾಲೂಕಿನ ತೂಕ ಮತ್ತು ಅಳತೆ ಕಾರ್ಯಾಲಯದ ನಿರೀಕ್ಷಕರು ಆಗಾಗ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಬೇಕು. ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಆದರೆ, ನಗರದ ಮಾರುಕಟ್ಟೆಯಲ್ಲಿ ಮಾತ್ರ ಈ ನಿಯಮ ಪಾಲನೆಯಾಗುತ್ತಿಲ್ಲ. ಈ ಕುರಿತು ತಾಲೂಕಿನ ನಿರೀಕ್ಷಕರು ಈವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಗ್ರಾಹಕರು ಆರೋಪಿಸಿದ್ದಾರೆ.

ವ್ಯಾಪಾರಸ್ಥರನ್ನು ಕೇಳಿದರೆ ‘ಬೇಕಾದರೆ ತೆಗೆದುಕೊಳ್ಳಿ, ಇಲ್ಲವಾದರೆ ಮುಂದೆ ಹೋಗಿ’ ಎಂದು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಾರೆ ಎಂದು ಗ್ರಾಹಕರೊಬ್ಬರು ‘ವಿಜಯವಾಣಿ’ ಎದುರು ಅಳಲು ತೋಡಿಕೊಂಡರು.

ನೆಹರು ಹಾಗೂ ದೊಡ್ಡಪೇಟೆ ಮಾರುಕಟ್ಟೆಯಲ್ಲಿ ತೂಕ ಸರಿಆಗಿಲ್ಲ. ಈ ಬಗ್ಗೆ ತಿಳಿಸಲು ತೂಕ ಮತ್ತು ಅಳಕೆ ನಿರೀಕ್ಷಕರಿಗೆ ಕರೆ ಮಾಡಿದರೆ, ಅವರು ಸ್ಪಂದಿಸುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾರುಕಟ್ಟೆಗೆ ಭೇಟಿ ನೀಡಿ, ಕಾನೂನು ಕ್ರಮ ಜರುಗಿಸಬೇಕು. | ಅಶೋಕ ಎಸ್.ಕೆ. ಸ್ಥಳೀಯ ಗ್ರಾಹಕ ಬಹಳ ದಿನದ ಹಿಂದೆ ರಾಣೆಬೆನ್ನೂರಿನ ಮಾರುಕಟ್ಟೆಯಲ್ಲಿ ದಾಳಿ ಮಾಡಿದಾಗ ತೂಕದ ಕಲ್ಲಿನಲ್ಲಿ ಮೋಸ ಮಾಡುತ್ತಿದ್ದವರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಇದೀಗ ಮತ್ತೊಂದು ಬಾರಿ ಕಾರ್ಯಾಚರಣೆ ಮಾಡುತ್ತೇವೆ. ಓಡಾಡಲು ನಮಗೆ ವಾಹನ ಇಲ್ಲದ ಕಾರಣ ಸಮಸ್ಯೆ ಆಗಿದೆ. ಆದ್ದರಿಂದ ಖಾಸಗಿ ವಾಹನ ಪಡೆದು ಎಲ್ಲ ಕಡೆ ಸಂಚರಿಸಿ ತೂಕದಲ್ಲಿ ಮೋಸ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. | ಲಲಿತಾ ಆರ್., ತೂಕ ಮತ್ತು ಅಳತೆ ಕಾರ್ಯಾಲಯದ ನಿರೀಕ್ಷಕಿ, ರಾಣೆಬೆನ್ನೂರ