ಉಡುಪಿ: ಸಮಾಜದ ಪ್ರತಿಯೊಬ್ಬ ಪ್ರಜೆಯೂ ಗ್ರಾಹಕರ ಹಕ್ಕುಗಳನ್ನು ತಿಳಿದುಕೊಳ್ಳುವುದು ಮುಖ್ಯ. ಪ್ರಪಂಚದಾದ್ಯಂತ ಇರುವ ವಸ್ತುಗಳು, ಸರಕುಗಳು ಮತ್ತು ಸೇವೆಗಳ ಮೌಲ್ಯ, ಸಮಗ್ರತೆ, ವೆಚ್ಚ ಹಾಗೂ ಗುಣಮಟ್ಟದ ಬಗ್ಗೆ ಅರಿತುಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಎಸ್ ಹೇಳಿದರು.
ಬುಧವಾರ ನಗರದ ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ಬಳಕೆದಾರರ ವೇದಿಕೆ, ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಸಹಯೋಗದೊಂದಿಗೆ ನಡೆದ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಗ್ರಾಹಕರ ಸಂರಕ್ಷಣಾ ಕಾಯ್ದೆಯಡಿ ದೂರುಗಳನ್ನು ಪರಿಹರಿಸಲು ಯಾವುದೇ ರೀತಿಯ ದೂರುಗಳನ್ನು ಆಯಾ ಜಿಲ್ಲೆಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ನೀಡಬಹುದು. ಗ್ರಾಹಕರಿಗೆ ಸರಕುಗಳ ಬಗ್ಗೆ ತಿಳಿದುಕೊಳ್ಳುವ ಹಕ್ಕು, ಶಿಕ್ಷಣ ಮತ್ತು ವ್ಯವಹಾರದ ಜಾಗೃತಿ ಹಕ್ಕು, ಅವಧಿ ಮುಗಿದ ಸರಕುಗಳ ಬಗ್ಗೆ ದೂರು ನೀಡುವ ಹಕ್ಕುಗಳನ್ನು ಹೊಂದಿದ್ದಾರೆ ಎಂದರು.
ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಜಿಲ್ಲಾಧ್ಯಕ್ಷ ಸುನಿಲ್ ಟಿ. ಮಾಸರೆಡ್ಡಿ ಮಾತನಾಡಿ, 1962 ರಲ್ಲಿ ಅಂದಿನ ಅಮೇರಿಕಾದ ಅಧ್ಯಕ್ಷ ಜಾನ್ ಎಫ್ ಕೆನಡಿ ಗ್ರಾಹಕರ ಹಕ್ಕುಗಳ ಜಾರಿಗೆ ತರುವಲ್ಲಿ ಪ್ರಮುಖರಾದರು. ಅಂದಿನಿಂದ ಮಾರ್ಚ್ 15 ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಆಚರಿಸಲು ಪ್ರಾರಂಭಿಸಲಾಯಿತು. ಗ್ರಾಹಕರ ಹಕ್ಕುಗಳ ತಿಳಿದು ಅವರಿಗೆ ರಕ್ಷಣೆ ಒದಗಿಸುವುದು ನಾಗರೀಕರ ಕರ್ತವ್ಯ. 2019ರ ಕಾಯಿದೆ ಪ್ರಕಾರ ಗ್ರಾಹಕರು ದೂರುಗಳನ್ನು ಆನ್‌ಲೈನ್ ಮುಖಾಂತರ ನೀಡಬಹುದು. ಪ್ರಕರಣ ದಾಖಲಿಸಿ ಅಂತಹವರಿಗೆ ಸೂಕ್ತ ನ್ಯಾಯವನ್ನು ಒದಗಿಸುತ್ತೆವೆ ಎಂದರು.
ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಮಾಜಿ ಪ್ರಾಂಶುಪಾಲೆ ಸುರೇಖಾ, ಪ್ರಾಧ್ಯಾಪಕ ಕೆ.ನಾರಾಯಣ, ನಿರ್ದೇಶಕಿ ನಿರ್ಮಲಾ, ಬಳಕೆದಾರರ ವೇದಿಕೆಯ ಎ.ಪಿ ಕೊಡಂಚ, ಜಿಲ್ಲಾ ಗ್ರಾಹಕ ಪರಿಹಾರ ಆಯೋಗದ ಸದಸ್ಯೆ ಸುಜಾತಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಪಿ.ಕೆ.ಬಿನೋಯ್ ಸ್ವಾಗತಿಸಿದರು. ಭಾರತೀಯ ವಿಕಾಶ ಟ್ರಸ್ಟ್‌ನ ಲಕ್ಷ್ಮೀಬಾಯಿ ನಿರೂಪಿಸಿದರು. ವಿಶ್ವಸ್ಥ ಹರಿಕೃಷ್ಣ ಶಿವತ್ತಾಯ ವಂದಿಸಿದರು.