Gavel on desk. Isolated with good copy space. Dramatic lighting. 
ಜಿಲ್ಲೆ

ಅನುಮತಿಯಿಲ್ಲದೆ ಖಾತೆಯಿಂದ ಹಣ ವಾಪಸ್ ಬ್ಯಾಂಕ್‌ಗೆ 30 ಸಾವಿರ ರೂ. ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ

ಮಂಗಳೂರು: ಖಾತೆದಾರರ ಅನುಮತಿಯಿಲ್ಲದೆ ಬ್ಯಾಂಕ್ ಖಾತೆಯಿಂದ ಹಣ ವಾಪಾಸ್ ಪಡೆದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯ ಎಸ್‌ಬಿಐ ಬ್ಯಾಂಕ್‌ಗೆ 30 ಸಾವಿರ ರೂ. ದಂಡ ವಿಧಿಸಿದೆ.

ಸಂದೇಶ್ ಮಹಾಬಲ ಶೆಟ್ಟಿ ಎಂಬವರು ನಗರದ ಬಿಕರ್ನಕಟ್ಟೆಯಲ್ಲಿ ತುಳುನಾಡು ಚಿಟ್ಸ್ ವ್ಯವಹಾರ ನಡೆಸುತ್ತಿದ್ದು, ರೀತು ಪ್ರಭಾಕರ್ ಎಂಬುವವರು ಕಂತಿನ ಹಣ ಕಟ್ಟಬೇಕಿತ್ತು. ಆದರೆ ಅವರು ಹಣ ಕಟ್ಟದ ಕಾರಣ ಜಾಮೀನು (ಶೂರಿಟಿ) ನೀಡಿದ್ದ ಜಯಶಂಕರ್ ಅವರು 90 ಸಾವಿರ ರೂ. ಮೊತ್ತದ ಚೆಕ್ ನೀಡಿದ್ದರು. ಅದನ್ನು ದೂರುದಾರರು ಎಸ್‌ಬಿಐ ಕಂಕನಾಡಿ ಶಾಖೆಗೆ ನಗದೀಕರಿಸಲು ಹಾಕಿದ್ದು, ಖಾತೆಗೆ ಹಣ ಜಮೆಯೂ ಆಗಿತ್ತು.

ಮತ್ತೆ ಖಾತೆ ಹಣ ವಾಪಾಸ್: ಜಾಮೀನುದಾರರು ನೀಡಿದ ಚೆಕ್ ಖಾತೆಗೆ ನಗದೀಕರಣವಾಗಿದ್ದರೂ ಬ್ಯಾಂಕ್ ಮ್ಯಾನೇಜರ್ ಕುಮ್ಮಕ್ಕಿನಿಂದ ಮತ್ತೆ ಶೂರಿಟಿದಾರನ ಖಾತೆಗೆ ಹಣ ವಾಪಾಸ್ ಜಮೆ ಮಾಡಿದ್ದ. ಇದು ನಿಯಮ ಪ್ರಕಾರ ಅಪರಾಧವೂ ಆಗಿದ್ದು, ಈ ಬಗ್ಗೆ ಚಿಟ್ಸ್ ಸಂಸ್ಥೆಯ ಮಾಲೀಕ ಮಹಾಬಲ ಶೆಟ್ಟಿ ಅವರು ಮ್ಯಾನೇಜರ್ ಪ್ರಶ್ನಿಸಿದಾಗ ‘ಮ್ಯಾನೇಜರ್ ಚೆಕ್ ಸಹಿ ಹೋಲಿಕೆಯಾಗಿಲ್ಲ’ ಎಂದು ಹಾರಿಕೆಯ ಉತ್ತರ ನೀಡಿದರು. ದೂರುದಾರರು ಇದಕ್ಕೆ ಪ್ರತಿಯಾಗಿ ‘ಹಾಗಾದರೆ ಹಣವನ್ನು ಖಾತೆಗೆ ಹೇಗೆ ಜಮೆ ಮಾಡಿಸಿದ್ದೀರಿ’ ಎಂದು ಪ್ರಶ್ನಿಸಿದಾಗ ಬ್ಯಾಂಕ್ ಮ್ಯಾನೇಜರ್ ಉಡಾೆ ಉತ್ತರ ನೀಡಿದ್ದರು. ಈ ಪ್ರಮಾದದ ಬಗ್ಗೆ ಬ್ಯಾಂಕ್‌ನ ಹಿರಿಯ ಅಧಿಕಾರಿಗಳಿಗೂ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ದೂರುದಾರರಿಗೆ ಯಾರಿಂದಲೂ ನ್ಯಾಯ ಸಿಗದ ಕಾರಣ ಈ ಬಗ್ಗೆ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದರು.

ನ್ಯಾಯಾಲಯ ಆದೇಶ: ಪ್ರಕರಣಕ್ಕೆ ಸಂಬಂಧಿಸಿ ಸಮಗ್ರ ವಿಚಾರಣೆ ನಡೆಸಿದ ಗ್ತಾಹಕ ನ್ಯಾಯಾಲಯವು ‘ಬ್ಯಾಂಕ್ ಖಾತೆಗೆ ಜಮೆಯಾದ ಹಣವನ್ನು ವಾಪಾಸ್ ಪಡೆದಿರುವುದು ಸರಿಯಾದ ಕ್ರಮವಲ್ಲ’ ಎಂದು ತೀರ್ಪು ನೀಡಿ ತಪ್ಪಿತಸ್ಥ ಬ್ಯಾಂಕ್‌ಗೆ 30ಸಾವಿರ ರೂ. ದಂಡ ವಿಧಿಸಿದೆ. ದಂಡದ ಮೊತ್ತವನ್ನು ತೀರ್ಪು ಹೊರಬಿದ್ದ 45ದಿನದೊಳಗೆ ನೀಡಬೇಕು. ಇದು ಮಾತ್ರವಲ್ಲದೆ ಚಿಟ್ ಖಾತೆದಾರರಿಗೆ ಬರಬೇಕಾದ 90ಸಾವಿರ ರೂ. ಮೊತ್ತಕ್ಕೆ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡುವಂತೆ ನಿರ್ದೇಶನ ನೀಡಿದೆ.