ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಕಚೇರಿ 
ಜಿಲ್ಲೆ

ಸೇವಾನ್ಯೂನತೆ ಪರಿಹಾರಕ್ಕೆ ಗ್ರಾಹಕರ ಆಯೋಗ ಆದೇಶ

ಶಿವಮೊಗ್ಗ: ನಗರದ ಶರಾವತಿ ಸೆರಾಮಿಕ್ ಕಚೇರಿಗೆ ಎಲಿವೇಟರ್(ಲಿಫ್ಟ್) ಅಳವಡಿಕೆ ಸಂಬಂಧ ಸೇವಾನ್ಯೂನತೆವೆಸಗಿದ ಪ್ರಕರಣದಲ್ಲಿ ದೂರುದಾರಿಗೆ ಸೂಕ್ತ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಬೆಂಗಳೂರು ಸಂಜಯನಗರದ ಐರನ್‌ಬರ್ಡ್ ಎಲಿವರ್ರ್ಸ್‌ ಪ್ರೈ.ಲಿ.ಗೆ ಆದೇಶಿಸಿದೆ.

ಶಿವಮೊಗ್ಗ ಶರಾವತಿ ಸೆರಾಮಿಕ್ ಮಾಲೀಕ ಮರಿಸ್ವಾಮಿ ಎಂಬುವರು ತಮ್ಮ ಕಚೇರಿಗೆ ಲಿಫ್ಟ್ ಅಳವಡಿಕೆ ಬಗ್ಗೆ ಐರನ್‌ಬರ್ಡ್ ಎಲಿವರ್ಸ್‌ ಸಂಸ್ಥೆ ಜತೆ ಮಾತುಕತೆ ನಡೆಸಿದ್ದರು. ಮುಂಗಡವಾಗಿ 2024ರ ಏಪ್ರಿಲ್‌ನಲ್ಲಿ 5 ಲಕ್ಷ ರೂ. ಚೆಕ್ ಕೂಡ ನೀಡಿದ್ದರು. ಹಣ ಪಡೆದ ನಂತರ ಹಲವು ಬಾರಿ ಮನವಿ ಮಾಡಿದರೂ ಲಿಫ್ಟ್ ಅಳವಡಿಸಿರಲಿಲ್ಲ. ಈ ಬಗ್ಗೆ ಮರಿಸ್ವಾಮಿ ಅವರು ಗ್ರಾಹಕರ ಆಯೋಗದ ಮೊರೆ ಹೋಗಿದ್ದರು.

ದೂರುದಾರರು ಸಲ್ಲಿಸಿರುವ ಪ್ರಮಾಣಪತ್ರ ಮತ್ತು ದಾಖಲಾತಿ ಪರಿಶೀಲಿಸಿದ ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಮತ್ತು ಸದಸ್ಯ ಬಿ.ಡಿ.ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು ಸಂಸ್ಥೆಯ ಸೇವಾನ್ಯೂನತೆ ಪರಿಗಣಿಸಿ ದೂರನ್ನು ಭಾಗಶಃ ಪುರಸ್ಕರಿಸಿದೆ. ಅಲ್ಲದೆ, ಈ ಆದೇಶವಾದ ದಿನದಿಂದ 45 ದಿನಗಳೊಳಗೆ ಮರಿಸ್ವಾಮಿ ಅವರಿಗೆ 5 ಲಕ್ಷ ರೂ. ಗಳನ್ನು ಶೇ.9ರ ಬಡ್ಡಿಯೊಂದಿಗೆ 2024ರ ಜೂ.4ರಿಂದ ಪಾವತಿಸಬೇಕೆಂದು ತಿಳಿಸಿದೆ. ತಪ್ಪಿದಲ್ಲಿ ಆ ಮೊತ್ತಕ್ಕೆ ಶೇ.12ರಂತೆ ಬಡ್ಡಿ ನೀಡಬೇಕೆಂದು ಹಾಗೂ 50 ಸಾವಿರ ರೂ. ಗಳನ್ನು ಮಾನಸಿಕ ಹಿಂಸೆ ಹಾಗೂ 10 ಸಾವಿರ ರೂ. ಅನ್ನು ವ್ಯಾಜ್ಯದ ಖರ್ಚಾಗಿ ನೀಡಬೇಕೆಂದು ಆದೇಶಿಸಿದೆ.