ಆಲೂರು: ಅಪೌಷ್ಟಿಕತೆ ಹೋಗಲಾಡಿಸಲು ಮೊಳಕೆ ಕಟ್ಟಿದ ಕಾಳುಗಳು ಸೇವನೆ ಅತ್ಯುತ್ತಮ ಎಂದು ಜೆಎಂಎಫ್ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಎಂ. ಸಿ.ನಿರ್ಮಲಾ ಸಲಹೆ ನೀಡಿದರು.
ತಾಲೂಕಿನ ಮುರುಡೂರು ಗ್ರಾಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಆಲೂರು, ತಾಲೂಕು ವಕೀಲರ ಸಂಘ ಹಾಗೂ ಅಂಗನವಾಡಿ ಆಲೂರು ಬಿ ವಲಯ ಸಂಯುಕ್ತಾಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಅಭಿಯಾನ ಜಾಗೃತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಾಸಾಯನಿಕ ವಸ್ತುಗಳನ್ನು ಹೊರತುಪಡಿಸಿ ಮನೆಯಲ್ಲಿ ತಯಾರಿಸಿದ ಆಹಾರ ಬಳಸುವುದರಿಂದ ರೋಗಮುಕ್ತರಾಗಿ ಬದುಕಬಹುದು. ಊಟದ ಸಮಯದಲ್ಲಿ ತರಕಾರಿಗಳನ್ನು ತಿನ್ನಬೇಕು. ಇದರ ಕುರಿತು ತಾಯಂದಿರು ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ತಹಸೀಲ್ದಾರ್ ಮಮತಾ ಮಾತನಾಡಿ, ಸರ್ಕಾರ ಮಹಿಳೆಯರ ಕಲ್ಯಾಣಕ್ಕೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸದುಪಯೋಗ ಪಡೆಯುವಂತೆ ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ, ಆರೋಗ್ಯ ಸಹಾಯಕಿಯರು ಅತ್ಯಂತ ಕಾಳಜಿ ವಹಿಸಿ ಯೋಜನೆಗಳನ್ನು ಜನರಿಗೆ ತಲುಪಿಸುತ್ತಿದ್ದಾರೆ ಎಂದರು.
ಕಣತೂರು ಗ್ರಾಪಂ ಅಧ್ಯಕ್ಷ ಲಿಂಗರಾಜು, ಸಿಡಿಪಿಒ ಎ.ಟಿ.ಮಲ್ಲೇಶ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೆ.ಎನ್. ಮಹೇಂದ್ರ, ಕಾರ್ಯದರ್ಶಿ ಆರ್.ಬಿ. ಸುರೇಶ್, ತಾಲೂಕು ಆರೋಗ್ಯಾಧಿಕಾರಿ ಎಚ್.ಆರ್.ತಿಮ್ಮಯ್ಯ, ಅಂಗನವಾಡಿ ಆಶಾ ಕಾರ್ಯಕರ್ತೆಯರು ಹಾಗೂ ಅಡುಗೆ ಸಿಬ್ಬಂದಿ ಹಾಜರಿದ್ದರು.