ಜಿಲ್ಲೆ

ಸಂಘಟನೆಗಳ ಒಗ್ಗೂಡುವಿಕೆಯೊಂದಿಗೆ ಹೆಜ್ಜೆ: ರೈತ ನಾಯಕ ಪಚ್ಚೆ ನಂಜುಂಡಸ್ವಾಮಿ ಕರೆ

ಮಂಡ್ಯ: ರೈತರು ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಎಲ್ಲವನ್ನೂ ಪರಿಹರಿಸುವ ನಿಟ್ಟಿನಲ್ಲಿ ಹೋರಾಟ ನಡೆಸುವ ಅನಿವಾರ್ಯತೆ ಇದೆ. ಈ ಕಾರಣದಿಂದಾಗಿ ರಾಜ್ಯದಲ್ಲಿರುವ ಎಲ್ಲ ರೈತ ಸಂಘಟನೆಗಳನ್ನೂ ಒಗ್ಗೂಡಿಸಿ ಏಕೀಕರಣ ಆಗಬೇಕೆಂಬ ಉದ್ದೇಶದಿಂದ ಸಭೆ ಕರೆಯಲಾಗಿದೆ ಎಂದು ರೈತ ನಾಯಕ ಪಚ್ಚೆ ನಂಜುಂಡಸ್ವಾಮಿ ಹೇಳಿದರು.

ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಆಯೋಜಿಸಿದ್ದ ರೈತ ಸಂಘಟನೆಗಳ ಏಕೀಕರಣ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ರೈತರ ಸಮಸ್ಯೆಗಳಿಗೆ ತಾತ್ವಿಕ ಅಂತ್ಯವಾಡಲು ಕವಲು ದಾರಿಯಲ್ಲಿರುವ ರೈತ ಸಂಘಟನೆಗಳ ಒಗ್ಗೂಡುವಿಕೆ ಮತ್ತು ರೈತ ಸಂಘಟನೆಗಳ ಸವಾಲುಗಳೊಂದಿಗೆ ಮಹತ್ವದ ಹೆಜ್ಜೆ ಇಡುವುದು ಅನಿವಾರ್ಯ ಎಂದು ಪ್ರತಿಪಾದಿಸಿದರು.

ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಸಭೆಯಲ್ಲಿ 13 ಸಂಘಟನೆಗಳು ಬಂದಿದ್ದವು. ಈಗ ಇಲ್ಲಿನ ಸಭೆಗೆ 21 ಸಂಘಟನೆಗಳು ಬಂದಿವೆ. ಕೆಲವು ಸಂಘಟನೆಗಳು ಹೊರಗಿದ್ದು, ಕಲ್ಲು ಹೊಡೆಯುವ ತಂತ್ರ ಮಾಡಬಹುದು. ಅಂತಹ ಕಲ್ಲುಗಳನ್ನೇ ಹೆಕ್ಕಿ ತೆಗೆದು ಸಂಘಟನೆಯನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.

ಪ್ರತಿ ಟನ್ ಕಬ್ಬಿಗೆ 5500 ರೂ. ನೀಡಬೇಕು. ಗುಜರಾತ್‌ನಲ್ಲಿ 5,500 ರೂ. ಹಾಗೂ ಮಹಾರಾಷ್ಟ್ರದಲ್ಲಿ 5 ಸಾವಿರ ರೂ. ನೀಡುತ್ತಿದ್ದಾರೆ. ರಾಜ್ಯದಲ್ಲೂ ಸಹ ಅಷ್ಟೇ ದರ ನಿಗದಿ ಮಾಡಬೇಕು. ರೈತರ ಕಬ್ಬಿನಿಂದ ಕಾರ್ಖಾನೆಯಲ್ಲಿ ತಯಾರಾಗುವ ಸ್ಪಿರೀಟ್, ಎಥನಾಲ್‌ನಿಂದಾಗಿ ಸರ್ಕಾರ‌್ಕೆಕ 5 ರಿಂದ 6 ಸಾವಿರ ರೂ ತೆರಿಗೆ ಬರುತ್ತಿದೆ. ಕಬ್ಬಿನಿಂದ ಸಕ್ಕರೆ ಕಾರ್ಖಾನೆಗಳು ಟನ್ ಕಬ್ಬಿಗೆ 15 ಸಾವಿರ ರೂ ಸಂಪಾದನೆ ಮಾಡುತ್ತಿವೆ. 10 ವರ್ಷದ ಹಿಂದೆ ಪುಟ್ಟಣ್ಣಯ್ಯನವರ ಹೋರಾಟದ ಫಲವಾಗಿ ಟನ್ ಕಬ್ಬಿಗೆ 2,500 ರಿಂದ 2,800 ರೂ. ನೀಡಲಾಗಿತ್ತು. ಅದೇ ರೀತಿ 2022-23ನೇ ಸಾಲಿನಲ್ಲಿ ನ್ಯಾಯಾಲಯ ಹೊರಡಿಸಿದ ಆದೇಶದ ಮೇರೆಗೆ 150 ರೂ. ಪ್ರೋತ್ಸಾಹ ಧನ ನೀಡಬೇಕಿತ್ತು. ಆದರೆ ಇನ್ನೂ ಪ್ರೋತ್ಸಾಹ ಧನ ನೀಡಿಲ್ಲ. ಆ ಹಣವನ್ನೂ ಸರ್ಕಾರ ರೈತರಿಗೆ ಪಾವತಿ ಮಾಡಬೇಕು ಎಂದು ಆಗ್ರಹಿಸಿದರು.

ಈ ಹಿಂದೆ ಎಲ್ಲ ಗ್ರಾಮಗಳಲ್ಲೂ ರೈತ ಸಂಘದ ಘಟಕಗಳಿದ್ದವು. ಅವುಗಳನ್ನು ಮತ್ತೆ ಅಸ್ತಿತ್ವಕ್ಕೆ ತರುವ ಅಗತ್ಯವಿದ್ದು, ಗ್ರಾಮದ ಮುಖ್ಯ ದ್ವಾರದಲ್ಲಿ ರಾಜಕಾರಣಿಗಳು, ಅಧಿಕಾರಿಗಳಿಗೆ ಪ್ರವೇಶದ ಬಗ್ಗೆ ಎಚ್ಚರಿಕೆಯ ಫಲಕಗಳನ್ನು ಅಳವಡಿಸಬೇಕು. ಇಂತಹ ಫಲಕಗಳು ಇಂಗ್ಲೆಂಡ್‌ನ ವಿಕ್ಟೋರಿಯಾ ಮತ್ತು ಹಾಲ್ಬರ್ಡ್ ಮ್ಯೂಸಿಯಂನಲ್ಲಿ ಕಾಣಬಹುದಾಗಿದೆ. ಪ್ರತಿ ಕ್ವಿಂಟಾಲ್ ಭತ್ತಕ್ಕೆ ನಿಗದಿಯಾಗಿರುವ ಹಣ ಕಡಿಮೆಯಾಗಿದೆ. ಅಕ್ಕಿ ಕೆ.ಜಿಗೆ 50 ರಿಂದ 70 ರೂ. ಇದೆ. ಅದರ ಪ್ರಕಾರ ಭತ್ತಕ್ಕೆ 3500 ರೂ. ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.

ಯುವಜನರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕಾರ್ಪೋರೇಟ್ ಕಂಪನಿಗಳು ರೈತರ ಜಮೀನುಗಳನ್ನು ಕೊಂಡುಕೊಳ್ಳಲು ಪ್ರಾರಂಭಿಸುತ್ತಿವೆ. ಈ ಪ್ರಕ್ರಿಯೆ ನಡೆದರೆ ಕೃಷಿಕರೇ ಕೂಲಿಕಾರರಾಗಬೇಕಾಗುತ್ತದೆ. ಈ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಂಡು ಹೋರಾಟ ರೂಪಿಸಬೇಕು. ವಕ್ಫ್ ಜತೆಗೆ ಸಮಾನಾನಂತರ ಸಮಸ್ಯೆ ಇದ್ದು, ಆರ್‌ಟಿಸಿಯಲ್ಲಿ ಗೋಮಾಳ, ಅರಣ್ಯ ಎಂದು ನಮೂದಾಗಿದ್ದು, ಇದು ವಕ್ಫ್ ನಷ್ಟೇ ದೊಡ್ಡ ಸಮಸ್ಯೆಗಳಾಗಿವೆ. ಇವುಗಳನ್ನು ತೆಗೆಯಲು ನೋಟಿಫಿಕೇಷನ್ ಆಗಬೇಕು ಸೇರಿದಂತೆ ವಿವಿಧ ವಿಚಾರಕ್ಕೆ ಸಂಬಂಧಿಸಿದಂತೆ ಹೋರಾಟ ರೂಪಿಸಬೇಕು. ಇದಲ್ಲದೆ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಂಬಗಳು, ಟಿಸಿಗಳನ್ನು ಸರ್ಕಾರವೇ ಅಳವಡಿಸಬೇಕು. ಪ್ರಸ್ತುತ ರೈತರೇ ಭರಿಸುತ್ತಿರುವುದರಿಂದ ಒಂದೂವರೆ ಲಕ್ಷದಿಂದ ಮೂರೂವರೆ ಲಕ್ಷ ರೂ ಆಗುತ್ತಿದೆ. ಇಷ್ಟು ದೊಡ್ಡ ಮಟ್ಟದ ಹಣವನ್ನು ರೈತರು ಪಾವತಿ ಮಾಡಲಾಗುವುದಿಲ್ಲ. ಈ ಹಣವನ್ನು ಸರ್ಕಾರವೇ ಪಾವತಿಸಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡರಾದ ಮನು ಸೋಮಯ್ಯ, ವಿದ್ಯಾಪ್ರಸಾದ್, ರಾಮಕೃಷ್ಣಯ್ಯ, ಮಂಜೇಶ್‌ಗೌಡ, ಅಣ್ಣೂರು ಮಹೇಂದ್ರ, ಶಂಭುನಹಳ್ಳಿ ಸುರೇಶ, ಇಂಡುವಾಳು ಚಂದ್ರಶೇಖರ್, ಬನ್ನೂರು ನಾರಾಯಣ್ ಇತರರಿದ್ದರು.