ಅಳವಂಡಿ: ಗ್ರಾಮದ ಸಿಪಿಎಸ್ ಶಾಲೆಯಲ್ಲಿ ಜಿಲ್ಲಾಡಳಿತ, ಜಿಪಂ ಕೊಪ್ಪಳ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಕಲಿಕೆ-ಟಾಟಾ ಟ್ರಸ್ಟ್ ಸಹಭಾಗಿತ್ವದಲ್ಲಿ ಅಳವಂಡಿ ವಲಯದ ಶಾಲೆಗಳ ನಲಿಕಲಿ ಬೋಧಿಸುವ ಶಿಕ್ಷಕರಿಗೆ ಮಂಗಳವಾರ ಸಮಾಲೋಚನಾ ಸಭೆ ಹಮ್ಮಿಕೊಳ್ಳಲಾಗಿತ್ತು.
ಸಿಆರ್‌ಪಿ ವೀರೇಶ ಕೌಟಿ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು. ನಲಿ-ಕಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರಿಂದ ಮಕ್ಕಳ ಕಲಿಕೆಯನ್ನು ಗುಣಾತ್ಮಕದತ್ತ ಕೊಂಡೊಯ್ಯಬಹುದು ಎಂದು ತಿಳಿಸಿದರು.
ಕಲಿಕೆ-ಟಾಟಾ ಟ್ರಸ್ಟ್ ಸಂಯೋಜಕ ಕಲ್ಲಪ್ಪ ಮಾತನಾಡಿ, ನಲಿ-ಕಲಿ ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಚಟುವಟಿಕೆಯ ಶಿಕ್ಷಣ ನೀಡುವುದು ಅವಶ್ಯ. ಈ ಉದ್ದೇಶಕ್ಕಾಗಿ ಕಲಿಕೆ-ಟಾಟಾ ಟ್ರಸ್ಟ್‌ನಿಂದ ನಲಿ-ಕಲಿ ಮಕ್ಕಳ ಅಭ್ಯಾಸಕ್ಕೆ ಪೂರಕವಾದ ಕಲಿಕಾ ಸಾಮಗ್ರಿಗಳನ್ನು ಪ್ರತಿ ಶಾಲೆಗೂ ನೀಡಲಾಗುವುದು. ಈ ಸಾಮಗ್ರಿಗಳನ್ನು ಬಳಸಿಕೊಂಡು ಕನ್ನಡ, ಗಣಿತ ವಿಷಯಗಳನ್ನು ಪರಿಣಾಮಕಾರಿಯಾಗಿ ಬೋಧನೆ ಮಾಡಬಹುದು. ಇವುಗಳನ್ನು ಬಳಸುವ ಬಗ್ಗೆ ಶಿಕ್ಷಕರಿಗೆ ತರಬೇತಿ ನೀಡಲಾಗುವುದು ಎಂದರು.
ಶಿಕ್ಷಣ ಸಂಯೋಜಕ ಸಿದ್ದೇಶ ಶೆಟ್ಟರ, ಸಿಆರ್‌ಪಿಗಳಾದ ವಿಜಯಕುಮಾರ ಟಿಕಾರೆ, ಬಸವರಾಜ, ವೀರೇಶ, ಕಲಿಕೆ-ಟಾಟಾ ಟ್ರಸ್ಟ್ ಸಂಯೋಜಕರಾದ ಬಸವರಾಜ ಹಾದಿಮನಿ, ಬಸವರಾಜ ಕಮತರ, ಕಲ್ಲಪ್ಪ ಇತರರಿದ್ದರು.