ಮಲೆಮಹದೇಶ್ವರ ಬೆಟ್ಟದಲ್ಲಿ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಆರ್.ಮಂಜುನಾಥ್ ಅವರು ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಜತೆಗೂಡಿ ಭೂಮಿಪೂಜೆ ನೆರವೇರಿಸಿದರು. ಎ.ಈ.ರಘು, ಡಾ.ಸಿದ್ದರಾಜು, ಚಿನ್ನಣ್ಣ ಇತರರು ಇದ್ದರು. 
ಜಿಲ್ಲೆ

ಪಶು ಆಸ್ಪತ್ರೆ ಕಟ್ಟಡ ನಿರ್ಮಾಣ ರೈತರಿಗೆ ವರದಾನ

ಹನೂರು: ಪವಾಡ ಪುರುಷ ಶ್ರೀ ಮಲೆಮಹದೇಶ್ವರರು ನೆಲೆಸಿರುವ ಮಲೆಮಹದೇಶ್ವರ ಬೆಟ್ಟದಲ್ಲಿ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣವಾಗುತ್ತಿರುವುದು ನಿಜಕ್ಕೂ ಈ ಭಾಗದ ರೈತರ ಪಾಲಿಗೆ ವರದಾನವಾಗಿದೆ ಎಂದು ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಮಲೆಮಹದೇಶ್ವರ ಬೆಟ್ಟದ ಹಳೆಯೂರಿನ ಬಳಿ ಭಾನುವಾರ ಪಶುಪಾಲನಾ ಇಲಾಖೆ ವತಿಯಿಂದ 45 ಲಕ್ಷ ರೂ. ವೆಚ್ಚದಲ್ಲಿನ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಆರ್.ಮಂಜುನಾಥ್ ಅವರ ಜತೆಗೂಡಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಮ.ಬೆಟ್ಟದ ತಪ್ಪಲಿನ ರೈತರು ಕೃಷಿಯ ಜತೆಗೆ ಹೆಚ್ಚಾಗಿ ಜಾನುವಾರುಗಳನ್ನು ಸಾಕಣೆ ಮಾಡುತ್ತಿದ್ದು, ಹೈನುಗಾರಿಕೆಗೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದಾರೆ. ಇಂದಿಗೂ ಗೋವುಗಳನ್ನು ದೇವರೆಂದು ಪೂಜಿಸುತ್ತಿದ್ದಾರೆ. ಆದರೆ ರೋಗ-ರುಜಿನಗಳು ಕಾಣಿಸಿಕೊಂಡರೆ ಅರಣ್ಯದಿಂದ ಕೂಡಿರುವ ಈ ಪ್ರದೇಶದಲ್ಲಿ ಪಶು ಆಸ್ಪತ್ರೆ ಇರಲಿಲ್ಲ. ಇದರಿಂದ ರೈತರು ತುಂಬ ತೊಂದರೆ ಅನುಭವಿಸುತ್ತಿದ್ದರು. ಈ ದೆಸೆಯಲ್ಲಿ ಶಾಸಕರು ಅಗತ್ಯ ಕ್ರಮ ವಹಿಸಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸುತ್ತಿರುವುದು ಈ ಭಾಗದ ರೈತರ ಸೌಭಾಗ್ಯ. ಇದರಿಂದ ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ಅಗತ್ಯ ವೈದ್ಯಕೀಯ ಸೇವೆ ದೊರಕಲಿದ್ದು, ರೈತರಿಗೆ ಅನುಕೂಲವಾಗಲಿದೆ. ಮಾದಪ್ಪನ ಆಶೀರ್ವಾದ ಎಲ್ಲರ ಮೇಲಿರಲಿ. ಬದುಕು ಹಸನಾಗಲಿ ಎಂದು ಆಶಿಸಿದರು.

ಅಗತ್ಯ ಚಿಕಿತ್ಸೆ ಸೇವೆ: ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ತಾಲೂಕು ಕೇಂದ್ರದಿಂದ ಹೆಚ್ಚು ಅಂತರವನ್ನು ಹೊಂದಿರುವ ಮ.ಬೆಟ್ಟದಲ್ಲಿ ಸುಸಜ್ಜಿತ ಪಶು ಆಸ್ಪತ್ರೆ ಇರಲಿಲ್ಲ. ಇದರಿಂದ ಗುಡ್ಡಗಾಡು ಪ್ರದೇಶದಿಂದ ಕೂಡಿರುವ ಈ ಭಾಗದ ರೈತರು ಜಾನುವಾರುಗಳಿಗೆ ಅಗತ್ಯ ಚಿಕಿತ್ಸೆ ಕೊಡಿಸಬೇಕಾದರೆ ತೊಂದರೆ ಅನುಭವಿಸುತ್ತಿದ್ದರು. ಪಶು ಆಸ್ಪತ್ರೆ ನಿರ್ಮಿಸಿ ಜಾನುವಾರುಗಳಿಗೆ ಅಗತ್ಯ ವೈದ್ಯಕೀಯ ಸೇವೆ ಒದಗಿಸುವಂತೆ ಮನವಿ ಮಾಡಿದ್ದರು. ಈ ದೆಸೆಯಲ್ಲಿ ಕಾಳಜಿ ವಹಿಸಿ 45 ಲಕ್ಷ ರೂ. ವೆಚ್ಚದಲ್ಲಿ ಪಶು ಆಸ್ಪತ್ರೆ ನಿರ್ಮಾಣಕ್ಕೆ ಇದೀಗ ಭೂಮಿಪೂಜೆ ನೆರವೇರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಗತ್ಯ ಚಿಕಿತ್ಸೆ ಸೇವೆ ದೊರಕಲಿದೆ. ಕಾಮಗಾರಿ ಜವಾಬ್ದಾರಿ ಹೊತ್ತವರು ಗುಣಮಟ್ಟವನ್ನು ಕಾಯ್ದುಕೊಳ್ಳುವ ಜತೆಗೆ ನಿಗದಿತ ಅವಧಿಯೊಳಗೆ ಕಟ್ಟಡ ಪೂರ್ಣಗೊಳಿಸಿ ಸೇವೆಗೆ ನೀಡಬೇಕು. ಈ ಬಗ್ಗೆ ಅಧಿಕಾರಿಗಳು ಆಗಾಗ್ಗೆ ಪರಿಶೀಲಿಸುವ ಮೂಲಕ ಅಗತ್ಯ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು, ಉಪ ಕಾರ್ಯದರ್ಶಿ ಜಿ.ಎಲ್.ಚಂದ್ರಶೇಖರ್, ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿದ್ದರಾಜು, ಪಿಡಬ್ಲ್ಯುಡಿ ಇಲಾಖೆಯ ಎಇಇ ಚಿನ್ನಣ್ಣ, ಎಇ ಸುರೇಂದ್ರ, ಮುಖಂಡರಾದ ವಿಜಯಕುಮಾರ್, ನಾಗಪ್ಪ, ರಾಜು, ಮಹದೇವ ಇತರರು ಇದ್ದರು.