ಮೈಸೂರು: ಮೈಸೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳ ಮೂತ್ರಪಿಂಡ ಸಮಸ್ಯೆಗೆ ಸಂಬಂಧಿದ ರೋಗಿಗಳ ಅನುಕೂಲಕ್ಕಾಗಿ ನಗರದಲ್ಲಿ ಶೀಘ್ರದಲ್ಲಿ ‘ನೆಪ್ರೋ-ಯುರಾಲಜಿ’ ಘಟಕದ ಪ್ರತ್ಯೇಕ ಕಟ್ಟಡ ನಿರ್ಮಾಣ ಆಗಲಿದೆ.
ಈ ಸಂಬಂಧ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಪಿಕೆಟಿಬಿ ಆಸ್ಪತ್ರೆಯ ಆವರಣದಲ್ಲಿ ಒಂದು ಎಕರೆ ಜಮೀನನ್ನು ಗುರುತಿಸಲಾಗಿದ್ದು, ಸದರಿ ಜಮೀನನ್ನು ಪರಭಾರೆ ಮಾಡಿಕೊಳ್ಳುವ ಕುರಿತಂತೆ ಹಾಗೂ ವಿವರವಾದ ಯೋಜನಾ ವರದಿಯ ಪ್ರಸ್ತಾವನೆಯನ್ನು ಸರ್ಕಾರ ನಿರೀಕ್ಷಿಸಿದೆ.
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಶಾಸಕ ಕೆ.ಹರೀಶ್‌ಗೌಡ ಅವರು ಮೈಸೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳ ಜನರಿಗೆ ಮೂತ್ರಪಿಂಡ ಸಮಸ್ಯೆಗೆ ಸಂಬಂಧಿಸಿದಂತೆ ರೋಗಗಳು ಜಾಸ್ತಿಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಎಂದು ಸರ್ಕಾರದ ಗಮನ ಸೆಳೆದರು.
‘ಮೂತ್ರಪಿಂಡ ವೈಫಲ್ಯದ ಸಮಸ್ಯೆಗಳಿಗೆ ಉನ್ನತ ಮಟ್ಟದ ಚಿಕಿತ್ಸೆ ಹಾಗೂ ಮೂತ್ರ ಪಿಂಡ ಕಸಿ ಇತ್ಯಾದಿಗಳನ್ನು ಸುಲಭವಾಗಿ ಸಿಗುವಂತಹ ಸರ್ಕಾರಿ ಹೈಟೆಕ್ ಮಾದರಿಯ ಮೂತ್ರಪಿಂಡ ಶಸ್ತ್ರಚಿಕಿತ್ಸೆ(ನೆಪ್ರೋ ಯುರಾಲಜಿ) ಆಸ್ಪತ್ರೆಯನ್ನು ಬೆಂಗಳೂರಿನ ಸಂಸ್ಥೆಯ ಮಾದರಿಯಲ್ಲಿ ಮೈಸೂರು ನಗರದಲ್ಲೂ ಮಂಜೂರು ಮಾಡಿ ಅನುಷ್ಠಾನಕ್ಕೆ ಮಾಡಬೇಕು ಎಂದು ಕೆ.ಹರೀಶ್‌ಗೌಡ ಸರ್ಕಾರಕ್ಕೆ ಮನವಿ ಮಾಡಿದರು.
ಸರ್ಕಾರದ ಲಿಖಿತ ಉತ್ತರ ಇಲ್ಲಿದೆ: ಮೂತ್ರಪಿಂಡ ವೈಫಲ್ಯದ ಸಮಸ್ಯೆಗಳ ರೋಗಿಗಳಿಗಾಗಿ ಬೆಂಗಳೂರಿನ ನೆಪ್ರೋ- ಯುರಾಲಜಿ ಸಂಸ್ಥೆಯ ಸಹಯೋಗದಲ್ಲಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಕೆ.ಆರ್.ಆಸ್ಪತ್ರೆ ಆವರಣದಲ್ಲಿ 2018ರಿಂದಲೇ ನೆಪ್ರೋ ಯುರಾಲಜಿ ಘಟಕವನ್ನು ಪ್ರಾರಂಭಿಸಲಾಗಿದೆ. ಸದರಿ ಘಟಕವು 60 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದ್ದು, ಮೂತ್ರಪಿಂಡ ವೈಫ್ಯಲ್ಯದ ಸಮಸ್ಯೆಗಳ ರೋಗಿಗಳಿಗೆ ಶಸ್ತ್ರಚಿಕಿತ್ಸೆಯನ್ನು ನಡೆಸುವುದರೊಂದಿಗೆ ಉನ್ನತ ಮಟ್ಟದ ಚಿಕಿತ್ಸೆಯನ್ನು ನೀಡಲಾಗುತ್ತದೆ.
ಇನ್ನು ಹೆಚ್ಚಿನ ಸೌಲಭ್ಯ ನೀಡುವ ಸಂಬಂಧ ಈ ಘಟಕಕ್ಕೆ ಪ್ರತ್ಯೇಕ ಕಟ್ಟಡ ನಿರ್ಮಿಸುವ ಮೂಲಕ ಇನ್ನೂ ಹೆಚ್ಚಿನ ಸೌಲಭ್ಯ ನೀಡಲಾಗುತ್ತದೆ. ಈ ಸಂಬಂಧ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಪಿಕೆಟಿಬಿ ಆಸ್ಪತ್ರೆಯ ಆವರಣದಲ್ಲಿ ಒಂದು ಎಕರೆ ಜಮೀನನ್ನು ಗುರುತಿಸಲಾಗಿದ್ದು, ಸದರಿ ಸಮೀನನ್ನು ಪರಭಾರೆ ಮಾಡಿಕೊಳ್ಳುವ ಕುರಿತಂತೆ ಹಾಗೂ ವಿವರವಾದ ಯೋಜನಾ ವರದಿಯ ಪ್ರಸ್ತಾವನೆಯನ್ನು ಸರ್ಕಾರ ನಿರೀಕ್ಷಿಸಿದೆ.
ಜತೆಗೆ ಕೆ.ಆರ್.ಆಸ್ಪತ್ರೆಯ ನೆಪ್ರೋಲಜಿ ವಿಭಾಗದಲ್ಲಿ 12 ಡಯಾಲಿಸಿಸ್ ಯಂತ್ರಗಳಿದ್ದು, ಪ್ರಸ್ತುತ ಪ್ರಾರಂಭವಾಗುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರವನ್ನು ಅಳವಡಿಸಲಾಗುತ್ತದೆ. ಜತೆಗೆ ಸದರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂತ್ರಪಿಂಡ ಖಾಯಿಲೆಯ ರೋಗಿಗಳಿಗೆ 20 ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ ಸದನದಲ್ಲಿ ಕೆ.ಹರೀಶ್ ಗೌಡ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ.