ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಬಳಿ 2.10 ಕೋಟಿ ರೂ.ವೆಚ್ಚದಲ್ಲಿ 10 ಲಕ್ಷ ಲೀಟರ್ ಸಾಮರ್ಥ್ಯದ ಮೇಲ್ಮಟ್ಟದ ಜಲಸಂಗ್ರಹಾಗರ ನಿರ್ಮಾಣಕ್ಕೆ ಶಾಸಕ ಕೆ.ಹರೀಶ್ ಗೌಡ ಬುಧವಾರ ಭೂಮಿಪೂಜೆ ನೆರವೇರಿಸಿದರು.
ಮೇಲ್ಮಟ್ಟದ ಜಲಸಂಗ್ರಹಾಗರ ನಿರ್ಮಾಣದಿಂದ ನಗರದ ವಾರ್ಡ್ ನಂ.23, 42 ಮತ್ತು 50ರ ವ್ಯಾಪ್ತಿಯ ಕಾಕರವಾಡಿ, ಬೆಸ್ತರಗೇರಿ, ಕುಂಬಾರಗೇರಿ, ಕುರುಬಗೇರಿ, ಗೊಲ್ಲಗೇರಿ, ಗೀತಾ ರಸ್ತೆ, ಕೆ.ಜಿ.ಕೊಪ್ಪಲು, ಹಳೇಬಂಡಿಕೇರಿ, ಗಾಣಿಗರ ಬೀದಿ, ಬೆಳ್ಳಿಕಟ್ಟೆ ಹಾಗೂ ದೇವರಾಜ ಮೊಹಲ್ಲಾ ಭಾಗದ ಪ್ರದೇಶಕ್ಕೆ ಅನುಕೂಲವಾಗಲಿದೆ ಎಂದು ಶಾಸಕ ಕೆ.ಹರೀಶ್ ಗೌಡ ಹೇಳಿದರು.
ನಗರದಲ್ಲಿ ಇದುವರೆಗೆ ಕುಡಿಯುವ ನೀರಿಗೆ ಸಮಸ್ಯೆ ಕಾಣಿಸಿಕೊಂಡಿಲ್ಲ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿ ಮತ್ತು ನಗರಪಾಲಿಕೆ ಆಯುಕ್ತರು ಹಾಗೂ ವಾಣಿವಿಲಾಸ ನೀರು ಸರಬರಾಜು ಮಂಡಳಿಯ ತಂಡ ರಚಿಸಿ ಸಹಾಯವಾಣಿ ತೆರೆಯಲಾಗಿದೆ. ಸಾರ್ವಜನಿಕರು ಮಿತವಾಗಿ ನೀರು ಬಳಸಬೇಕು. ಮುಂದಿನ ಎರಡು ತಿಂಗಳ ಬಳಿಕ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
ಈ ಸಂದರ್ಭ ನಗರ ಪಾಲಿಕೆ ಕಾರ್ಯಪಾಲಕ ಇಂಜಿನಿಯರ್ ನಾಗರಾಜ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳಾದ ಧನುಷ್, ಪ್ರಶಾಂತ್ ಹಾಗೂ ಇತರರು ಇದ್ದರು.