ಹುಬ್ಬಳ್ಳಿ: ಇಲ್ಲಿಯ ಉಣಕಲ್‌ನ ಶ್ರೀನಗರದ ಚೇತನ ಬಿಜಿನೆಸ್ ಸ್ಕೂಲ್‌ನಲ್ಲಿ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಮಾದರಿಯಲ್ಲಿ ಮಹಾಕುಂಭ ಮೇಳ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.
ನಾಲ್ಕು ದಿನಗಳವರೆಗೆ ಈ ಪ್ರದರ್ಶನ ನಡೆಯಲಿದ್ದು, ಹೊಸ ನಗರದಂತೆ ಭಾಸವಾಗುತ್ತಿದೆ. ವಿದ್ಯುತ್ ಪೂರೈಕೆ, ಮೂರು ನದಿಗಳ ಸಂಗಮ, ರೈಲ್ವೆ ಮತ್ತು ಬಸ್‌ಗಳ ಓಡಾಟದ ಮಾದರಿ ನಿರ್ಮಿಸಲಾಗಿದೆ. ಎಂಬಿಎ ವಿದ್ಯಾರ್ಥಿಗಳು ಈ ಟೌನ್‌ಶಿಪ್ ನಿರ್ಮಿಸಿದ್ದು, ಬಹು ಆಕರ್ಷಣೆಯಿಂದ ಕೂಡಿದೆ.
ಮೇಯರ್ ರಾಮಪ್ಪ ಬಡಿಗೇರ ಅವರು ಈ ಪ್ರದೇಶ ವೀಕ್ಷಿಸಿ ಮಾತನಾಡಿ, ಪ್ರಯಾಗ್‌ರಾಜ್ ಮಾದರಿ ನಿರ್ಮಿಸಿದ ವಿದ್ಯಾರ್ಥಿಗಳು ನೀವೇ ಧನ್ಯರು. ನಾನು ಕೂಡ ಮಹಾಕುಂಭ ಮೇಳಕ್ಕೆ ಮುನ್ನ ಹೋಗಿದ್ದೆ. ಅಲ್ಲಿಯ ಟೌನ್‌ಶಿಪ್ ನಿರ್ಮಾಣ ಬಹು ಅಂದವಾಗಿ ನಿರ್ಮಿಸಲಾಗಿತ್ತು. ನಾವು ಅಲ್ಲಿಗೆ ಹೋಗಿ ನೋಡುವುದಕ್ಕಿಂತ ಇಲ್ಲಿಯ ಮಾದರಿ ನೋಡಿದರೆ ಸಾಕೆನ್ನುವ ಭಾವ ಬರುತ್ತದೆ ಎಂದರು.
ಮಹಾನಗರ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ, ಚೇತನ ಬಿಜಿನೆಸ್ ಸ್ಕೂಲ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ವಿಶ್ವನಾಥ ಕೊರವಿ, ಅಕಾಡೆಮಿಕ್ ನಿರ್ದೇಶಕ ಡಾ. ರಮಾಕಾಂತ ಕುಲಕರ್ಣಿ, ಡೀನ್ ಎಂ.ಎನ್. ಮಾಣಿಕ್, ಕಿರಣಕುಮಾರ ಗಲಗಲಿ ಇತರರು ಇದ್ದರು.