ಮೈಸೂರು: ಮೇಕೆದಾಟು ಅಥವಾ ರಾಶಿಮನಲ್ ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ನಗರದ ಕರ್ಜನ್ ಪಾರ್ಕ್ ಉದ್ಯಾನದ ಸಭಾಂಗಣದಲ್ಲಿ ಮಂಗಳವಾರ ನಗರದಲ್ಲಿ ಕಾವೇರಿ ಕುಟುಂಬದ ಮಹತ್ವ ಸಭೆ ನಡೆಯಿತು. ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯದ ರೈತರು ಸಭೆಯಲ್ಲಿ ಪಾಲ್ಗೊಂಡು ಮಹತ್ವದ ಚರ್ಚೆ ನಡೆಸಿದರು. ಜಲಾಶಯ ನಿರ್ಮಾಣದ ಸಂಬಂಧ ತಜ್ಞರೊಂದಿಗೆ ಸಮಾಲೋಚಿಸಿ ಮುಂದಿನ ಕಾವೇರಿ ಕುಟುಂಬ ಸಭೆಯಲ್ಲಿ ಚರ್ಚಿಸಲು ತೀರ್ಮಾ ನಿಸಲಾಯಿತು.
ಕಾವೇರಿ ಕುಟುಂಬ ಸಂಚಾಲಕ ಪ್ರೊ.ಜನಕರಾಜ್ ಮಾತನಾಡಿ, ಮುಕ್ತ ಮನಸ್ಸಿನಿಂದ ಚರ್ಚೆ ನಡೆಸಿದರೆ ಯಾವುದೇ ಸಮಸ್ಯೆಗೂ ಖಂಡಿತ ಪರಿಹಾರ ಸಿಗುತ್ತದೆ. ಪ್ರಕೃತಿ ಸಂಪತ್ತು ನಾಶ, ನೀರಿನ ಸಮರ್ಪಕ್ಕೆ ಬಳಕೆ ವಿಫಲತೆ ಕಾರಣದಿಂದ ನೀರಿಗಾಗಿ ಎರಡು ರಾಜ್ಯಗಳ ನಡುವೆ ಹೋರಾಟ ನಡೆಯುತ್ತಿದೆ. ನಾವೆಲ್ಲ ಮುಂದಿನ ದಿನಗಳನ್ನು ಗಮನಿಸಿ ಚಿಂತನೆ ಮಾಡಿದರೆ ಖಂಡಿತ ಕಾವೇರಿ ಕುಟುಂಬದ ಕಾರ್ಯ ಯಶಸ್ವಿಯಾಗುತ್ತದೆ ಎಂದರು.
ರೈತ ಮುಖಂಡ ಪ್ರೊ.ಕೆ.ಸಿ.ಬಸವರಾಜ್ ಮಾತನಾಡಿ, ಜನತಂತ್ರ ವ್ಯವಸ್ಥೆಯು ನೀರಿನ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾದ ಕಾರಣ ಸರ್ವೋಚ್ಛ ನ್ಯಾಯಾಲಯ ಮಧ್ಯಪ್ರವೇಶ ಮಾಡಿ ಆದೇಶ ಹೊರಡಿಸಿದೆ. ನಾವು ಕಾವೇರಿ ಕುಟುಂಬದ ಸಭೆಗಳ ಮೂಲಕ ಜನತಂತ್ರ ವ್ಯವಸ್ಥೆಯನ್ನು ಗೆಲ್ಲಬೇಕು ಎಂದು ಪ್ರಯತ್ನ ಮಾಡಿದರೂ ಕೆಲವು ಕಾರಣಗಳಿಂದ ವಿಫಲವಾದೆವು. ರಾಶಿಮನಲ್ ಅಣೆಕಟ್ಟೆ ನಿರ್ಮಾಣ ಪರಿಣಿತರ ವರದಿಯನ್ನು ಗಮನಿಸಬೇಕು ಹಾಗೂ ಸಾದಕ ಬಾಧಕ ಚರ್ಚೆ ಮಾಡಬೇಕು ಎಂದು ತಿಳಿಸಿದರು.
ರೈತ ಮುಖಂಡ ಕುರುಬೂರು ಶಾಂತಕುಮಾರ್ ಮಾತನಾಡಿ, ಹೆಚ್ಚುವರಿ ನದಿ ನೀರು ಸಮುದ್ರಕ್ಕೆ ಸೇರುವ ಬದಲು ರೈತರು ಸದ್ಬಳಕೆ ಮಾಡಿಕೊಳ್ಳಲು ವಿಶಾಲ ಚಿಂತನೆ ನಡೆಸಬೇಕು. ಎಲ್ಲ ಸರ್ಕಾರಗಳು ರೈತರನ್ನ ತುಳಿಯುತ್ತಿವೆ, ನಾವು ರೈತ ಕುಟುಂಬದ ಸದಸ್ಯರಾಗಿ ಚಿಂತನೆ ನಡೆಸಬೇಕಾಗಿದೆ. ಅದಕ್ಕಾಗಿ ಕಾವೇರಿ ಕುಟುಂಬದ ಸಭೆ ಕರೆಯಲಾಗಿದೆ. ಕಾವೇರಿ ಕುಟುಂಬದ 16 ಸಭೆಗಳನ್ನು ನಡೆಸಿ ಎರಡು ರಾಜ್ಯಗಳ ನಡುವೆ ಸಮನ್ವಯ ಕಾಯ್ದುಕೊಂಡಿದ್ದೇವೆ ಎಂದರು.
ತಮಿಳುನಾಡು ರೈತ ಮುಖಂಡ ಪಿ.ಆರ್. ಪಾಂಡ್ಯನ್ ಮಾತನಾಡಿ, ಕಾವೇರಿ ನೀರಿನ ಸಮಸ್ಯೆಗೆ ಕಾವೇರಿ ಕುಟುಂಬದ ಮೂಲಕ ಪರಿಹಾರ ಕಂಡುಕೊಂಡರೆ ದೇಶವೇ ಅಚ್ಚರಿಯಾಗಿ ನೋಡುತ್ತದೆ. ರೈತರ ಒಗ್ಗಟ್ಟಿನ ಶಕ್ತಿ ಬಲವಾಗುತ್ತದೆ. ಎರಡು ರಾಜ್ಯಗಳು ಒಮ್ಮತ ತೀರ್ಮಾನ ಕೈಗೊಂಡರೆ ಕಾವೇರಿ ಪ್ರಾಧಿಕಾರದ ಮುಂದೆ ನಾವೇ ಅಪೀಲು ಮಾಡೋಣ. ಕರ್ನಾಟಕದ ರೈತ ಮುಖಂಡರು ರಾಶಿಮನಲ್ ಸ್ಥಳ ವೀಕ್ಷಣೆಗೆ ಬಂದರೆ ನಾವು ಸ್ವಾಗತ ನೀಡುತ್ತೇವೆ ಎಂದರು
ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಪ್ರಕಾಶ್ ಕಮ್ಮರಡಿ, ತಮಿಳುನಾಡು ರೈತ ಮುಖಂಡರಾದ ರಾಮನಗೌಂಡರ್, ಸುಧಾ ಧರ್ಮಲಿಂಗಂ, ಪಾಂಡಿಚೆರಿ ಸೋಮುಪಿಳ್ಳೆ, ಕೇರಳ ರೈತ ಮುಖಂಡರಾದ ಕೆ.ವಿ.ಬಿಜು, ಬಿನಯ್ ಥಾಮಸ್, ಕರ್ನಾಟಕದ ರೈತ ಮುಖಂಡರಾದ ಪ್ರೊ.ಶಿವಲಿಂಗಯ್ಯ ಸುನಂದ ಜಯರಾಮ್, ಕೆ.ಬೋರಯ್ಯ, ಮಂಜೇಶ್ ಗೌಡ, ನದೀಮ್, ಕನಕಪುರ ಗಜೇಂದ್ರ. ಹೊನ್ನೂರ್ ಹಾಗೂ ಇತರರು ಇದ್ದರು.