ಹೊಳೆನರಸೀಪುರದ ತಾಲೂಕು ಕಚೇರಿ ಆವರಣದಲ್ಲಿ ಶಾಸಕ ಎಚ್.ಡಿ.ರೇವಣ್ಣ ಅಧ್ಯಕ್ಷತೆಯಲ್ಲಿ ತಾಲೂಕು ಆಡಳಿತ ವತಿಯಿಂದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ರಥೋತ್ಸವದ ಪೂರ್ವಭಾವಿ ಸಭೆ ನಡೆಯಿತು. ರಮೇಶ್ ಎಲ್.ಎಸ್., ಶಾಲು ಇತರರು ಇದ್ದರು. 
ಜಿಲ್ಲೆ

ಸ್ವಂತ ದುಡ್ಡಲ್ಲಿ ಲಕ್ಷ್ಮೀನರಸಿಂಹಸ್ವಾಮಿ ರಥ ನಿರ್ಮಾಣ

ಹೊಳೆನರಸೀಪುರ: ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವದ ಪೂಜಾ ಕಾರ್ಯಕ್ರಮಗಳು ಹಿಂದಿನಿಂದ ನಡೆಯಲಿ ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.

ಪಟ್ಟಣದ ಮಾ.14 ರಂದು ನಡೆಯಲಿರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ ನಡೆಯುವ ಹಿನ್ನೆಲೆಯಲ್ಲಿ ಸೋಮವಾರ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

1985-86ರಲ್ಲಿ ದೇವೇಗೌಡರು ದೇವಾಲಯದ ಎಲ್ಲ ಗೋಪುರಗಳನ್ನು ನಿರ್ಮಿಸಿದ್ದರು. ಅದಕ್ಕೆ ಒಂದು ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡಿದ್ದೇವೆ. ನಾನು ಸ್ವಂತ ಹಣದಲ್ಲಿ ರಥ ನಿರ್ಮಿಸಿದ್ದೇನೆ. ಇದಕ್ಕೆ ಯಾರೊಬ್ಬರೂ ಹಣ ಕೊಟ್ಟಿಲ್ಲ ಎಂದು ಹೇಳಿದರು.

ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ ಮಾತನಾಡಿ, ತಾಲೂಕು ಆಡಳಿತ ವತಿಯಿಂದ ಪ್ರಸಾದ ವಿನಿಯೋಗ ಸೇರಿದಂತೆ ರಥ ಸಿದ್ಧತೆ, ರಥಕ್ಕೆ ಹೊಸದಾಗಿ ಬಟ್ಟೆ ಹೊಲಿಸುವುದು, ಜಾತ್ರಾ ಪ್ರಯುಕ್ತ ನಡೆಯುವ ಎಲ್ಲ ವಿಷಯದಲ್ಲೂ ತಾಲೂಕು ಆಡಳಿತ ಜವಾಬ್ದಾರಿ ತೆಗೆದುಕೊಂಡಿದೆ. ನಿಯಮಾನುಸಾರ ಮುಜರಾಯಿ ಕಾಯ್ದೆಯ ಪ್ರಕಾರ ರಥೋತ್ಸವ ಕಾರ್ಯಕ್ರಮ ನಡೆಸಲು ಮುಂದಾಗಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕರು ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನಡುವೆ ಕೆಲ ಸಮಯ ಮಾತಿನ ಚಕಮಕಿ ನಡೆಯಿತು. ಈ ಸಭೆಯಲ್ಲಿ ಚರ್ಚೆಯಾದ ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದು ಜಿಲ್ಲಾಧಿಕಾರಿ ಸೂಚನೆಯಂತೆ ರಥೋತ್ಸವ ಕಾರ್ಯಕ್ರಮವನ್ನು ನಡೆಸಲು ಮುಂದಾಗುತ್ತೇನೆ ಎಂದು ತಹಸಿಲ್ದಾರ್ ತಿಳಿಸಿದರು.

ಈ ವೇಳೆ ಹಿಂದಿನಿಂದಲೂ ಆನಂದ ಎಂಬ ಯುವಕ ರಥ ನಿರ್ಮಿಸುವ ಕಾರ್ಯ ಮಾಡುತ್ತಿದ್ದಾರೆ, ಅವರಿಗೆ ನೀಡಿ, ಅದೇ ರೀತಿ ರಥದ ಸ್ವಚ್ಛತೆ ಹಾಗೂ ಇತರ ಕಾರ್ಯಗಳು ಹಿಂದೆ ನಡೆಯುತ್ತಿದ್ದ ರೀತಿಯಲ್ಲೇ ವ್ಯವಸ್ಥೆ ಮಾಡಿ ಎಂದು ಶಾಸಕರು ಹೇಳಿದರು.

ರಥದ ಮೇಲೆ ಎಲ್ಲೂ ನನ್ನ ಹೆಸರು ಹಾಕಿಸಿಲ್ಲ, ಶಾಸಕನಾಗಿ ಏನು ಕೆಲಸ ಮಾಡಬೇಕೋ ಅದು ಮಾಡುತ್ತೇವೆ. ರಥ ಹಾಗೂ ದೇವಾಲಯದ ಹೂವಿನ ಅಲಂಕಾರಕ್ಕೆ ಎಷ್ಟು ಖರ್ಚಾಗುತ್ತೆ ಗೊತ್ತ ಎಂದು ಶಾಸಕ ರೇವಣ್ಣ ಪ್ರಶ್ನಿಸಿದರು.

ಸಮಾಜ ಸೇವಕ ಶಂಕರನಾರಾಯಣ ಐತಾಳ್ ಅವರು ರಥ ಸಾಗುವ ರಸ್ತೆಯಲ್ಲಿ ಚರಂಡಿಯನ್ನು ಒತ್ತುವರಿ ಮಾಡಿ, ರಸ್ತೆಗೆ ಮೆಟ್ಟಿಲು ನಿರ್ಮಿಸಿದ್ದಾರೆ, ರಥ ಸಾಗಲು ತೊಂದರೆಯಾಗುತ್ತೆ ಎಂದು ಗಮನ ಸೆಳೆದರು.

ಜಾತ್ರೆಯ ದಿನ ಯುವಕರು ಕರ್ಕಶ ಶಬ್ದ ಮಾಡುವ ಪೀಪಿ ಊದುತ್ತಾ, ಬಹಳ ಕಿರಿಕಿರಿ ಉಂಟು ಮಾಡುತ್ತಾರೆ, ಅದಕ್ಕೆ ಕಡಿವಾಣ ಹಾಕಿ ಎಂದು ಸಲಹೆ ವ್ಯಕ್ತವಾಯಿತು.

ತಹಸೀಲ್ದಾರ್ ರಮೇಶ್ ಎಲ್.ಎಸ್, ತಾಪಂ ಇಒ ಜಿ.ಮುನಿರಾಜು, ಡಿವೈಎಸ್ಪಿ ಶಾಲು, ಪುರಸಭೆ ಮುಖ್ಯಾಧಿಕಾರಿ ಶಿವಶಂಕರ್, ಪಿಎಸ್ ಐ ಅಭಿಜೀತ್, ಪೃಥ್ವಿರಾಜ್, ಕುಮಾರಸ್ವಾಮಿ, ಮುಖಂಡರಾದ ಶಿವಶಂಕರ್, ಬಾಬು, ಪ್ರದೀಪ್, ಶ್ರೀ ಲಕ್ಷಿ ನರಸಿಂಹಸ್ವಾಮಿ ದೇವಾಲಯದ ಅರ್ಚಕ ನಾರಾಯಣ, ರಾಮಭಟ್ಟರು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.