ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಅನುಕೂಲಕ್ಕಾಗಿ ಯಲಹಂಕ ವ್ಯಾಪ್ತಿಯಲ್ಲಿ ಕಲ್ಯಾಣ ಮಂಟಪವನ್ನು ನಿರ್ಮಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬಿಎಂಟಿಸಿಯ ಯಲಹಂಕ ಘಟಕದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಿಎಂಟಿಸಿ ಸೇರಿದಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಯಾವುದಾದರೂ ಶುಭ ಕಾರ್ಯ ಮಾಡಲು ಕಲ್ಯಾಣ ಮಂಟಪಕ್ಕೆ ಲಕ್ಷಾಂತರ ರೂ. ಖರ್ಚು ಮಾಡಬೇಕಿದೆ. ಅದಕ್ಕೆ ಪರಿಹಾರ ಎನ್ನುವಂತೆ ಬಿಎಂಟಿಸಿಯಿಂದಲೇ ಕಲ್ಯಾಣ ಮಂಟಪ ನಿರ್ಮಿಸುವ ಪ್ರಸ್ತಾವನೆಯಿದೆ. ಯಲಹಂಕ ಘಟಕ ವ್ಯಾಪ್ತಿಯಲ್ಲಿ ನಿಗಮಕ್ಕೆ ಸೇರಿದ ೧ ಎಕರೆ ಜಾಗವಿದ್ದು, ಅಲ್ಲಿ ಕಲ್ಯಾಣ ಮಂಟಪ ಸ್ಥಾಪನೆ ಮಾಡಲಾಗುವುದು. ಮುಂದಿನ ಒಂದು ವರ್ಷದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುವುದು ಎಂದರು.
ಬಿಎಂಟಿಸಿಯ ಟಿಟಿಎಂಸಿಗಳಲ್ಲಿ ನಿರ್ವಹಣೆ ಕೊರತೆಯಿದೆ. ೧೨ ವರ್ಷಗಳ ಹಿಂದೆ ನಿರ್ಮಿಸಲಾದ ಟಿಟಿಎಂಸಿಗಳಿಗೆ ಬಣ್ಣ ಬಳಿದಿಲ್ಲ. ಹೀಗಾಗಿ ಟಿಟಿಎಂಸಿಗಳು ಕಳೆಗುಂದಿದಂತೆ ಕಾಣುತ್ತಿವೆ. ಹೀಗಾಗಿ ಬಿಎಂಟಿಸಿಯ ಎಲ್ಲ ಟಿಟಿಎಂಸಿಗಳಿಗೂ ಬಣ್ಣ ಬಳಿಯಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜತೆಗೆ ಟಿಟಿಎಂಸಿಗಳಲ್ಲಿನ ದುರಸ್ತಿ ಕಾರ್ಯವನ್ನೂ ಮಾಡಿಸುವಂತೆ ತಿಳಿಸಿದ್ದೇನೆ ಎಂದು ಹೇಳಿದರು.
ಬಹುಮಾನ ವಿತರಣೆ:
ಬಿಎಂಟಿಸಿ ಘಟಕಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಮಾಡಲು ಅಕ್ಟೋಬರ್ ತಿಂಗಳಲ್ಲಿ ಏರ್ಪಡಿಸಲಾಗಿದ್ದ ಸ್ವಚ್ಛತಾ ಅಭಿಯಾನ ಸ್ಪರ್ಧೆಯಲ್ಲಿ, ಘಟಕವನ್ನು ಉತ್ತಮವಾಗಿ ಸ್ವಚ್ಛಗೊಳಿಸಿದ ಘಟಕಗಳ ವ್ಯವಸ್ಥಾಪಕರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶುಕ್ರವಾರ ಯಲಹಂಕದಲ್ಲಿ ನಡೆದ ಕಾರ್ಯಾಕ್ರಮದಲ್ಲಿ ಬಹುಮಾನ ವಿತರಿಸಿದರು.
ಬಿಎಂಟಿಸಿಯು ಪ್ರತಿದಿನ ೫೭,೪೬೩ ಟ್ರಿಪ್‌ಗಳ ಮೂಲಕ ೪೩ ಲಕ್ಷ ಪ್ರಯಾಣಿಕರಿಗೆ ಸೇವೆ ನೀಡಲಾಗುತ್ತದೆ. ನಿಗಮ ವ್ಯಾಪ್ತಿಯಲ್ಲಿ ೧ ತರಬೇತಿ ಕೇಂದ್ರ, ೪ ಕೇಂದ್ರೀಯ ಕಾರ್ಯಾಗಾರ ಹಾಗೂ ೫೦ ಘಟಕಗಳಿವೆ. ಆದರೆ, ಬಹುತೇಕ ಘಟಕಗಳು ಸಮರ್ಪಕವಾಗಿ ಸ್ವಚ್ಛತಾ ಕಾರ್ಯವನ್ನು ನಡೆಸದಿರುವುದು ಕಂಡು ಬಂದಿತ್ತು. ಹೀಗಾಗಿ ನಿಗಮ ವ್ಯಾಪ್ತಿಯ ಘಟಕಗಳನ್ನ ಸ್ವಚ್ಛಗೊಳಿಸುವ ಸಲುವಾಗಿ ಘಟಕಗಳ ನಡುವ ಸ್ವಚ್ಛತಾ ಅಭಿಯಾನ ಸ್ಪರ್ಧೆ ಏರ್ಪಡಿಸಲಾಗಿತ್ತು. ಅದರಲ್ಲಿ ಘಟಕ ವ್ಯಾಪ್ತಿಯಲ್ಲಿನ ಅನುಪಯುಕ್ತ ವಸ್ತುಗಳನ್ನು ತೆರವು ಮಾಡಿ, ಗಿಡ-ಹುಲ್ಲುಗಳನ್ನು ಕಿತ್ತು ಸ್ವಚ್ಛಗೊಳಿಸಿ ಘಟಕದ ಆವರಣ ನಿಗಮದ ಎಲ್ಲ ೭ ವಲಯ ವ್ಯಾಪ್ತಿಯ ತಲಾ ಎರಡು ಘಟಕಗಳಿಗೆ ಪ್ರಥಮ, ದ್ವಿತೀಯ ಹಾಗೂ ತಲಾ ೬ ಘಟಕಗಳಿಗೆ ತೃತೀಯ ಮತ್ತು ಸಮಾಧಾನಕರ ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಎಸ್.ಆರ್. ವಿಶ್ವನಾಥ್, ಬಿಎಂಟಿಸಿ ವ್ಯವಸ್ಥಾಕ ನಿರ್ದೇಶಕಿ ಸತ್ಯವತಿ ಮತ್ತಿತರರಿದ್ದರು.
7ನೇ ತಾರೀಖಿನೊಳಗೆ ವೇತನ ಪಾವತಿ:
ನಾನು ಸಾರಿಗೆ ಸಚಿವನಾದ ನಂತರ ನಾಲ್ಕೂ ಸಾರಿಗೆ ನಿಗಮಗಳ ನೌಕರರಿಗೆ ಸಮರ್ಪಕವಾಗಿ ವೇತನವಾಗುತ್ತಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಆರೋಪಿಸಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಪ್ರತಿ ತಿಂಗಳು ೧ರಿಂದ ೭ನೇ ತಾರೀಖಿನೊಳಗೆ ವೇತನ ಪಾವತಿಸಲಾಗುತ್ತಿದೆ. ಆದರೆ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ವೇತನ ಪಾವತಿಗೆ ನಿಗದಿತ ದಿನವಿರಲಿಲ್ಲ. ಅವರು ಸಮರ್ಪಕವಾಗಿ ವೇತನ ಪಾವತಿಸದೇ ನಮ್ಮ ವಿರುದ್ಧ ಆರೋಪ ಮಾಡಿದ್ದರು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಟೀಕಿಸಿದ್ದಾರೆ.
ಶಕ್ತಿ ಯೋಜನೆ ಬಗ್ಗೆ ಬಿಜೆಪಿ ನಾಯಕರು ಸಾಕಷ್ಟು ಆರೋಪ ಮಾಡಿದ್ದರು. ಆದರೆ, ಶಕ್ತಿ ಯೋಜನೆ ಯಶಸ್ವಿಯಾಗಿದ್ದು, ಇದರಿಂದ ಮಹಿಳಾ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಿದೆ.
ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ