ಬೆಂಗಳೂರು: ಅಂತರ್ಜಲ ಮಟ್ಟ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಬಿಬಿಎಂಪಿ, ರಾಜಧಾನಿಯಲ್ಲಿ ಇಂಗುಗುಂಡಿ ನಿರ್ಮಿಸಲು ಯೋಜನೆ ರೂಪಿಸಿದೆ. ಯೋಜನೆಯಡಿ ಸಾವಿರ ಉದ್ಯಾನಗಳಲ್ಲಿ ಇಂಗುಗುಂಡಿ ಸ್ಥಾಪಿಸಲು ಪಾಲಿಕೆ ಗುರಿ ಹಾಕಿಕೊಂಡಿದೆ. ಆರಂಭದಲ್ಲಿ 115 ಉದ್ಯಾನಗಳಲ್ಲಿ ಇದನ್ನು ತೊಡುವ ಕಾರ್ಯ ನಡೆಯಲಿದೆ.
ದಾಸರಹಳ್ಳಿ, ಯಲಹಂಕ ಮತ್ತು ದಕ್ಷಿಣ ವಲಯಗಳಲ್ಲಿ ಈಗಾಗಲೇ ನಿರ್ಮಿಸಲಾಗುತ್ತಿದೆ. ರಾಜರಾಜೇಶ್ವರಿನಗರ, ಬೊಮ್ಮನಹಳ್ಳಿ, ಮಹದೇವಪುರ, ಪೂರ್ವ ಮತ್ತು ಪಶ್ಚಿಮ ವಲಯಗಳಲ್ಲಿ ಹಂತಹಂತವಾಗಿ ಇಂಗು ಗುಂಡಿ ನಿರ್ಮಿಸಲು ಪಾಲಿಕೆಯ ತೋಟಗಾರಿಕೆ ವಿಭಾಗ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಪ್ರತಿ ಇಂಗು ಗಂಡಿಗೆ 40 ಸಾವಿರ ರೂ.ವೆಚ್ಚವಾಗಲಿದೆ. ಒಂದು ಗುಂಡಿಯಲ್ಲಿ 4 ಸಾವಿರ ಲೀ.ನೀರು ಸಂಗ್ರಹ ಮಾಡಬಹುದು. ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್‌ಆರ್) ನಿಧಿಯನ್ನು ಬಳಸಿಕೊಳ್ಳಲಾಗುತ್ತಿದೆ. ಪಾರ್ಕ್‌ಗಳಲ್ಲಿ ಸುರಿಯುವ ಮಳೆ ನೀರುನ್ನು ವ್ಯರ್ಥವಾಗಿ ಹರಿಯದಂತೆ ಇಂಗುಗುಂಡಿಯಲ್ಲಿ ಶೇಖರಿಸಲಾಗುತ್ತದೆ. 2011ರಲ್ಲಿ ಪಾಲಿಕೆ ವ್ಯಾಪ್ತಿಯ ಸೇರಿರುವ 8 ವಲಯಗಳ ಪಾರ್ಕ್‌ಗಳಲ್ಲಿ 951 ಇಂಗುಗುಂಡಿ ತೊಡಲಾಗಿತ್ತು. ದಿನೇದಿನೆ ಅಂತರ್ಜಲ ಮಟ್ಟ ಕುಸಿತವನ್ನು ತಡೆಗೆ ಈಗ ಮತ್ತೆ ಪಾಲಿಕೆ ಇಂಗುಗುಂಡಿ ನಿರ್ಮಿಸಲು ಮುಂದಾಗಿದೆ. ಪಾರ್ಕ್‌ನಲ್ಲಿ ಇಂಗುಗುಂಡಿ ನಿರ್ಮಿಸಲು ಮೊದಲು ಜಾಗವನ್ನು ಗುರುತಿಸಲಾಗುತ್ತದೆ. 20 ಅಡಿ ಅಳ, 4 ಅಡಿ ಅಗಲ ಅಗೆಯಲಾಗುತ್ತದೆ. ಮಳೆ ನೀರು ಪೋಲಾಗಿ ಹರಿಯದಂತೆ ಇದನ್ನು ಹಿಡಿದಿಟ್ಟುಕೊಂಡು ಇಂಗುಗುಂಡಿಯಲ್ಲಿ ಶೇಖರಿಸಲಾಗುತ್ತದೆ.
ನಗರದ ಎಲ್ಲ ಉದ್ಯಾನಗಳಲ್ಲಿ ಈಗಾಗಲೇ ಮಳೆನೀರು ಕೊಯ್ಲು ವ್ಯವಸ್ಥೆ ರೂಪಿಸಲು ಪಾಲಿಕೆ ಕಾರ್ಯೋನ್ಮುಖವಾಗಿದೆ. ಮುಂದಿನ ಒಂದು ವರ್ಷದಲ್ಲಿ ಎಲ್ಲ ಪಾರ್ಕ್‌ಗಳಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಇದರಿಂದಾಗಿ ಉದ್ಯಾನದಲ್ಲಿರುವ ಮರ-ಗಿಡಗಳಿಗೆ ನೀರೂಣಿಸಲು ಅನುಕೂಲವಾಗಲಿದೆ. ಉದ್ಯಾನವನ್ನು ತಂಪಾಗಿಸಲು ಮೂಲಕ ಪಾರ್ಕ್‌ನಲ್ಲಿ ಹಸಿರುವ ವಾತಾವರಣ ಉಂಟಾಗಲಿದೆ. ವಾಯುವಿಹಾರಗಳಿಗೆ ಶುದ್ಧ ಆಮ್ಲಜನಕ ಸಿಗುವಂತಾಗಲಿದೆ. ಪಾಲಿಕೆ ತೋಟಗಾರಿಕೆ ವಿಭಾಗ ಈಗಾಗಲೇ ಖಾಸಗಿ ಸಹಭಾಗಿತ್ವದಡಿ ಲಾಲ್‌ಬಾಗ್, ಚಾಮರಾಜಪೇಟೆಯ ಜಿಂಕೆವನ ಸೇರಿ ಹಲವು ಪಾರ್ಕ್‌ಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆಯಡಿ ಇಂಗುಗುಂಡಿ ನಿರ್ಮಿಸಿದೆ.
ಉದ್ಯಾನ ಮಿತ್ರ:
ಉದ್ಯಾನ ನಿರ್ವಹಣೆ ಹಾಗೂ ಸಂರಕ್ಷಣೆಗಾಗಿ ‘ಉದ್ಯಾನ ಮಿತ್ರ’, ಮರಗಳ ರಕ್ಷಣೆಗೆ ‘ಹಸಿರು ರಕ್ಷಕ’ ಹಾಗೂ ಕೆರೆಗಳ ನಿರ್ವಹಣೆಗೆ ‘ಕೆರೆ ಮಿತ್ರ’ ಮೊಬೈಲ್-ವೆಬ್ ಆಪ್‌ನ್ನು ಬಿಬಿಎಂಪಿ ಈಗಾಗಲೇ ಅನಾವರಣ ಮಾಡಿದೆ. ಗಾರ್ಡನ್ ಸಿಟಿ’ ಹಿರಿಮೆ ಹೆಚ್ಚಿಸುವ ನಿಟ್ಟಿನಲ್ಲಿ ಹಸಿರುಕರಣಗೊಳಿಸಲು, ನಾಗರಿಕರಿಗೆ ಗುಣಮಟ್ಟ ಆಮ್ಲಜನಕ, ಮನೋಲ್ಲಾಸ ಒದಗಿಸಲು, ಉದ್ಯಾನ ನಿರ್ವಹಣೆ, ಸಂರಕ್ಷಣೆ ಹೊಣೆಗಾರಿಕೆಯನ್ನು ಪರಿಣಾಮಕಾರಿ ನಿರ್ವಹಿಸುವ ಉದ್ದೇಶದಿಂದಾಗಿ ‘ಉದ್ಯಾನ ಮಿತ್ರ’ ಆ್ಯಪ್ ಸಹಕಾರಿಯಾಗಲಿದೆ. ಸಾರ್ವಜನಿಕರು ಮೊದಲು ಆಪ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ನಂತರ ಪಾಲಿಕೆ ವ್ಯಾಪ್ತಿಯ ಉದ್ಯಾನ ವಿವರ ತಿಳಿದುಕೊಳ್ಳಬಹುದು. ಉದ್ಯಾನದ ಸಮಯ, ಸ್ವಚ್ಛತೆ, ನಿರ್ವಹಣೆ,ಅಭಿವೃದ್ಧಿಗೆ ಸಂಬಂಧಿಸಿದಂತೆ ಮೊಬೈಲ್ ಆಪ್‌ನಲ್ಲಿ ಕುಂದು ಕೊರತೆ ಭಾವಚಿತ್ರಗಳನ್ನು ಅಪ್‌ಲೋಡ್ ಮಾಡಬಹುದು. ಪೂರ್ವ 276, ಪಶ್ಚಿಮ 236, ಯಲಹಂಕ 280, ರಾಜರಾಜೇಶ್ವರಿನಗರ 126, ದಕ್ಷಿಣ 139, ಬೊಮ್ಮನಹಳ್ಳಿ 138, ಮಹದೇವಪುರ 30 ಹಾಗೂ ದಾಸರಹಳ್ಳಿ ವಲಯ 45 ಸೇರಿ ಒಟ್ಟು 1,270 ಉದ್ಯಾನಗಳಿವೆ. ಸಾರ್ವಜನಿಕರು ಮೇಲಿನ ಎಲ್ಲ ಉದ್ಯಾನಗಳ ವಿವರವನ್ನು ವೀಕ್ಷಿಸಬಹುದು.