ಜಿಲ್ಲೆ

ಇಂದಿರಾ ಕ್ಯಾಂಟೀನ್ ನಿರ್ಮಾಣ ಶೀಘ್ರ ಪೂರ್ಣ

ತರೀಕೆರೆ: ಅಜ್ಜಂಪುರ ಪಟ್ಟಣದ ಬಸ್‌ನಿಲ್ದಾಣದ ಸಮೀಪ ನಿರ್ಮಿಸುತ್ತಿರುವ ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಗೌರಾಪುರ ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಕಡೂರಿನ ಹಿರೇನಲ್ಲೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು 1.3 ಕಿ.ಮೀ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಅಜ್ಜಂಪುರ ಪಟ್ಟಣವನ್ನು ತಾಲೂಕು ಕೇಂದ್ರವಾಗಿಸಿ ಸಮಗ್ರ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಲಾಗಿದೆ. ತಾಲೂಕಿನ ಪ್ರಗತಿಗೆ 3 ಕೋಟಿ ರೂ.ಬಿಡುಗಡೆಯಾಗಿದ್ದು, ರಸ್ತೆ, ಸೇರಿದಂತೆ ಅಗತ್ಯ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಭಿವೃದ್ಧಿಪರ ಚಿಂತನೆ ಹೊಂದಿದ್ದು, ಪಂಚ ಗ್ಯಾರಂಟಿಗೆ ದೊಡ್ಡ ಮೊತ್ತ ಖರ್ಚು ಮಾಡುತ್ತಿದೆ. ಆರ್ಥಿಕ ಸುಸ್ಥಿತಿ ಆಧರಿಸಿ ಮುಂದೆ ಜನಪ್ರಿಯ ಕಾರ್ಯಕ್ರಮದ ರೂಪುರೇಷೆ ತಯಾರಿಸಲಿದೆ. ಉಪ ಚುನಾವಣೆಯಲ್ಲಿ ಮತದಾರ ಕಾಂಗ್ರೆಸ್‌ಗೆ ಕೈಹಿಡಿದಿರುವುದು ಬಿಜೆಪಿ ನಿದ್ದೆಗೆಡಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತಷ್ಟು ಬಲಿಷ್ಟವಾಗುವುದರಲ್ಲಿ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೆಪಿಸಿಸಿ ಸದಸ್ಯ ಜಿ.ನಟರಾಜ್ ಮಾತನಾಡಿ, ಗೌರಾಪುರ ಭದ್ರಾ ಮೇಲ್ದಂಡೆ ಪಂಪ್‌ಹೌಸ್ ಬಳಿ ಇರುವ 100 ಮೀಟರ್ ಉದ್ದದ ರಸ್ತೆ ಮಾತ್ರವಲ್ಲ, ಮಾಳೇನಹಳ್ಳಿ ಗ್ರಾಮದ ರೈತರ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಮನವಿ ಮಾಡಿದರು.

ಗ್ರಾಪಂ ಅಧ್ಯಕ್ಷ ಮುಸ್ತಾಕ್ ಅಹಮದ್, ಕಾಂಗ್ರೆಸ್ ನಗರ ಘಟಕ ಅಧಕ್ಷ ತಿಪ್ಪೇಶ್ ಮಡಿವಾಳ್, ಬಗರ್‌ಹುಕುಂ ಸಮಿತಿ ಸದಸ್ಯ ಪ್ರಕಾಶ್, ತಾಪಂ ಮಾಜಿ ಸದಸ್ಯ ಆರ್.ಕೃಷ್ಣಪ್ಪ, ಬಿ.ಕೆ.ರಾಘವೇಂದ್ರ, ನವೀನ್, ರಿಯಾಜ್ ಅಹಮದ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಟಿ.ಜಿ.ರಮೇಶ್ ಇದ್ದರು.