ಜಿಲ್ಲೆ

ವರ್ಷದೊಳಗೆ ಪೌರ ಕಾರ್ಮಿಕರಿಗೆ ಮನೆ: ಎನ್.ರೂಪೇಶ

Vijayanagara - Veerendra

ಹೊಸಪೇಟೆ: ಹೊಸಪೇಟೆ ನಗರದ ಸ್ವಚ್ಛತೆಗಾಗಿ ದುಡಿಯುತ್ತಿರುವ ಪೌರ ಕಾರ್ಮಿಕರಿಗೆ ಮುಂದಿನ ವರ್ಷದೊಳಗೆ ನಗರಸಭೆಯಿಂದ ಮನೆ ನಿರ್ಮಿಸಿಕೊಡಲಾಗುವುದು ಎಂದು ನಗರಸಭೆ ಉಪಾಧ್ಯಕ್ಷ ಎನ್.ರೂಪೇಶ ಕುಮಾರ್ ಭರವಸೆ ನೀಡಿದರು.

ಹೊಸಪೇಟೆ ನಗರಸಭೆ, ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ನಗರದ ಸ್ವಚ್ಛತೆಯನ್ನು ಕಾಪಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. ಐತಿಹಾಸಿಕ ಹಂಪಿ, ತುಂಗಭದ್ರಾ ಜಲಾಶಯ ಪಕ್ಕದಲ್ಲೇ ಇರುವುದರಿಂದ ಪ್ರತಿನಿತ್ಯ ಸಾವಿರಾರು ಜನ ದೇಶ- ವಿದೇಶಿ ಪ್ರವಾಸಿಗರು ಆಗಮಿಸುತ್ತಾರೆ. ಜೊತೆಗೆ ಸ್ಥಳೀಯರ ಆರೋಗ್ಯದ ದೃಷ್ಟಿಯಿಂದಲೂ ಸ್ವಚ್ಛತೆ ಕಾಯ್ದುಕೊಳ್ಳುವುದು ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ನಗರಸಭೆಯ ಪೌರ ಕಾರ್ಮಿಕರ ಶ್ರಮ ಅಭಿನಂದನೀಯ ಎಂದರು.

ಪೌರ ಕಾರ್ಮಿಕರ ಸೇವೆಯನ್ನು ಗೌರವಿಸಿ ಪೌರಕಾರ್ಮಿಕರಿಗೆ ತಲಾವೊಂದು ಸುಸಜ್ಜಿತ ಮನೆ ನಿರ್ಮಿಸಿಕೊಡಲಾಗುವುದು. ಕಳೆದ ಅವಧಿಯಲ್ಲಿ ಇಲ್ಲಿನ ಜಂಬುನಾಥ ಹಳ್ಳಿ ಬೈಪಾಸ್‌ನಲ್ಲಿ ಪೌರ ಕಾರ್ಮಿಕರ ವಸತಿಗಾಗಿ ನಗರಸಭೆಯಿಂದ ಜಮೀನು ಖರೀದಿಸಿದೆ. ಅದರಲ್ಲಿ ಮನೆ ನಿರ್ಮಿಸಿಕೊಳ್ಳಲು ನಗರಸಭೆಯಿಂದ ಆದಷ್ಟು ಬೇಗ ಸಹಾಯಧನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಪೌರ ಕರ್ಮಿಕರಿಗೆ ಸಂಕಷ್ಟ ಭತ್ಯೆ ಸೇರಿದಂತೆ ಹತ್ತು ಹಲವು ಸೌಲಭ್ಯಳನ್ನು ಒದಗಿಸಲಾಗುತ್ತಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವ ಜೊತೆಗೆ ನಗರದ ಸ್ವಚ್ಛತೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪೌರಾಯುಕ್ತ ಬಿ.ಟಿ.ಬಂಡಿವಡ್ಡರ ಮಾತನಾಡಿ, ನಗರದ ಸ್ವಚ್ಛತೆಯಲ್ಲಿ ತೊಡಗುವ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ತಮ್ಮ ಮಕ್ಕಳಿಗೆ ಉತ್ತಮ ಹಾಗೂ ಉನ್ನತ ಶಿಕ್ಷಣ ಒದಗಿಸಬೇಕು. ಪೌರ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ನಗರಸಭೆಯಿಂದ ಅಗತ್ಯ ನೆರವು ನೀಡಲಾಗುತ್ತದೆ. ಅರ್ಹರು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಕಾಂಗ್ರೆಸ್ ಮುಖಂಡ ಎಚ್.ಎನ್.ಎಫ್. ಇಮಾಮ್ ನಿಯಾಜಿ ಉದ್ಘಾಟಿಸಿದರು. ನಗರಸಭೆ ವ್ಯವಸ್ಥಾಪಕ ಬಿ.ಕೃಷ್ಣಮೂರ್ತಿ, ಪೌರಕಾರ್ಮಿಕ ಮುಖಂಡರಾದ ಜಿ.ನೀಲಕಂಠ, ಸುಂಕಪ್ಪ, ಬಿ.ಸತೀಶ್, ಖಾಜಾ ಹುಸೇನ್, ಬಿ.ಮರೆಣ್ಣ, ಎಚ್.ಜಗನ್ನಾಥ್, ವಿಜಯ ಕುಮಾರ್, ಸಲ್ಮಾನ್, ಬಿ.ಎಂ.ನಾಗೇಂದ್ರ ಇದ್ದರು.