ಹೆಬ್ರಿ ತಾಲೂಕು ಪಂಚಾಯಿತಿ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿರುವುದು 
ಜಿಲ್ಲೆ

ಹೆಬ್ರಿ ತಾಪಂ ಕಟ್ಟಡ ನಿರ್ಮಾಣ ನನೆಗುದಿಗೆ

ಇಂದಿರಾ ಎನ್ ಕೆ

ನರೇಂದ್ರ ಎಸ್ ಮರಸಣಿಗೆ ಹೆಬ್ರಿ

ಚಾರ ಗ್ರಾಮದಲ್ಲಿ ನಡೆಯುತ್ತಿದ್ದ ಹೆಬ್ರಿ ತಾಲೂಕು ಪಂಚಾಯಿತಿಯ ನೂತನ ಕಟ್ಟಡದ ಕಾಮಗಾರಿ ಅರ್ಧಕ್ಕೆ ನಿಂತಿದೆ. ತಾಲೂಕು ಪಂಚಾಯಿತಿಯ ಅಧಿಕಾರಿಗಳ ನಿರ್ಲಕ್ಷೃದಿಂದ ಹಿಂದಿನ ಸರ್ಕಾರ ಮಂಜೂರು ಮಾಡಿದ್ದ 1.47 ಕೋಟಿ ರೂ. ಅನುದಾನ ಸರ್ಕಾರಕ್ಕೆ ವಾಪಸ್ ಹೋಗಿದೆ.
ಹೆಬ್ರಿ ತಾಲೂಕು ಪಂಚಾಯಿತಿಯ ನೂತನ ಕಟ್ಟಡ ನಿರ್ಮಾಣಕ್ಕೆ ಅಂದಾಜು 3.47 ಕೋಟಿ ರೂ. ವೆಚ್ಚ ತಗುಲಲಿದ್ದು, ಆದರೆ ಸರ್ಕಾರ 1.47 ಕೋಟಿ ರೂ. ಮಾತ್ರ ಮಂಜೂರುಗೊಳಿಸಿದೆ. ಇನ್ನೂ 2 ಕೋಟಿ ರೂ.ಗೂ ಹೆಚ್ಚು ಅನುದಾನ ಅಗತ್ಯವಿದೆ. ಶೀಘ್ರವೇ ಹೆಬ್ರಿ ತಾಲೂಕು ಪಂಚಾಯಿತಿಯ ನೂತನ ಕಟ್ಟಡ ನಿರ್ಮಾಣಗೊಂಡು ಲೋಕಾರ್ಪಣೆಗೊಳ್ಳಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಗುತ್ತಿಗೆದಾರರು ಕಳೆದ ಡಿಸೆಂಬರ್‌ನಲ್ಲೇ ಒಂದು ಹಂತದ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಆದರೆ ಅನುದಾನದ ಕೊರತೆಯಿಂದ ಕಾಮಗಾರಿ ನಿಲುಗಡೆಯಾಗಿದೆ. ಈಗಾಗಲೇ ಉದ್ಘಾಟನೆಗೊಳ್ಳಬೇಕಿದ್ದ ಕಟ್ಟಡ ಇನ್ನೂ ನಿರ್ಮಾಣ ಹಂತದಲ್ಲೇ ಇದೆ.

2023ರಲ್ಲೇ ಭೂಮಿಪೂಜೆ

ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಈಗಿನ ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೆಬ್ರಿಯ ನೂತನ ತಾಲೂಕು ಪಂಚಾಯಿತಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಹೆಬ್ರಿಯ ಚಾರದಲ್ಲಿ ಅಧಿಕಾರಿಗಳ ಮೂಲಕ ಜಮೀನು ಗೊತ್ತುಪಡಿಸಿ ಕಟ್ಟಡ ನಿರ್ಮಾಣಕ್ಕೆ ಮುಂದಡಿ ಇಟ್ಟಿದ್ದರು. ಪಂಚಾಯತ್‌ರಾಜ್ ಇಲಾಖೆ ಮೂಲಕ 1.47 ಕೋಟಿ ರೂ. ಅನುದಾನವನ್ನೂ ಮಂಜೂರುಗೊಳಿಸಿದ್ದರು. ಕಳೆದ ಮಾರ್ಚ್ ತಿಂಗಳಿನಲ್ಲಿ ಭೂಮಿ ಪೂಜೆ ನೆರವೇರಿಸಿ ಕಟ್ಟಡ ಕಾಮಗಾರಿ ಆರಂಭಿಸಲಾಗಿತ್ತು.

ಅನುದಾನ ವಾಪಸ್ ಹೋದ ಬಗ್ಗೆ ಅಧಿಕಾರಿಗಳಿಂದ ವರದಿ ಕೇಳಿದ್ದೇನೆ. ತಾಂತ್ರಿಕ ಸಮಸ್ಯೆಗಳಿಂದ ಅನುದಾನ ವಾಪಸ್ ಹೋಗಿದೆ. ನಮ್ಮ ಇಲಾಖೆಯಲ್ಲಿ ಕರ್ತವ್ಯ ಲೋಪ ಆಗಿಲ್ಲ. ಪಂಚಾಯತ್‌ರಾಜ್ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಶೀಘ್ರದಲ್ಲಿ ವಾಪಾಸು ಹೋದ ಅನುದಾನ ಮರಳಿ ಬರಲಿದೆ.ಪ್ರತಿಕ್ ಬಾಯಲ್, ಉಡುಪಿ ಜಿಪಂ ಸಿಇಒ