ಇಳಕಲ್ಲದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವವನ್ನು ಶಾಸಕ ವಿಜಯಾನಂದ ಕಾಶಪ್ಪನವರ ಉದ್ಘಾಟಿಸಿದರು. ಹುನಗುಂದ ತಹಸೀಲ್ದಾರ್ ನಿಂಗಪ್ಪ ಬಿರಾದಾರ, ಇಳಕಲ್ಲ ತಹಸೀಲ್ದಾರ್ ಸತೀಶ ಕೂಡಲಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ, ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ, ಮುಖಂಡ ವಿಜಯ ಗದ್ದನಕೇರಿ, ಪರಶುರಾಮ ಪಮ್ಮಾರ ಇದ್ದರು. 
ಜಿಲ್ಲೆ

ಬರುವ ವರ್ಷದಲ್ಲಿ ಶಿಕ್ಷಕರಿಗೆ ಗುರುಭವನ ನಿರ್ಮಾಣ

ಇಳಕಲ್ಲ(ಗ್ರಾ): ಪ್ರಾಥಮಿಕ ಶಾಲಾ ಶಿಕ್ಷಕರ ಅನುಕೂಲಕ್ಕಾಗಿ ಮುಂದಿನ ವರ್ಷದೊಳಗಾಗಿ ನಗರದಲ್ಲಿ ಗುರುಭವನ ನಿರ್ಮಿಸಿ ಕೊಡಲಾಗುವುದೆಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಸ್ಥಳೀಯ ವಿಜಯ ಮಹಾಂತೇಶ ಅನುಭವ ಮಂಟಪದಲ್ಲಿ ಗುರುವಾರ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ತಂದೆ ಮಾಜಿ ಸಚಿವ ಎಸ್. ಆರ್. ಕಾಶಪ್ಪನವರ ಶಿಕ್ಷಣ ಮತ್ತು ಶಿಕ್ಷಕರ ಬಗ್ಗೆ ಅತಿ ಕಾಳಜಿ ಹೊಂದಿದ್ದರು. ಹೀಗಾಗಿ 1989 ರಿಂದ ತಾಲೂಕಿನಲ್ಲಿ ಸಾಕಷ್ಟು ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಕಾಲೇಜುಗಳು ಮತ್ತು ಶಾಲಾ ಕಟ್ಟಡಗಳನ್ನು ಕಟ್ಟಿಸಿಕೊಟ್ಟರು. ಈಗ ನಾವೂ ಈ ಒಂದೂವರೆ ವರ್ಷದ ಅವಧಿಯಲ್ಲಿ 18 ಕೋಟಿ ರೂ. ಶೈಕ್ಷಣಿಕ ಅನುದಾನ ತಂದಿದ್ದೇವೆ. ನನ್ನನ್ನು ಒಬ್ಬ ಶಿಕ್ಷಣವಂತನಾಗಿ ಮಾಡುವ ಹಿನ್ನೆಲೆಯಲ್ಲಿ ಪ್ರಹ್ಲಾದ ರಾಯಚೂರ ಎಂಬ ಶಿಕ್ಷಕರ ಪಾತ್ರ ಅತ್ಯಂತ ದೊಡ್ಡದು ಎಂದು ನೆನಪಿಸಿಕೊಂಡರು.

ಹುನಗುಂದ ತಹಸೀಲ್ದಾರ್ ನಿಂಗಪ್ಪ ಬಿರಾದಾರ, ಇಳಕಲ್ಲ ತಹಸೀಲ್ದಾರ್ ಸತೀಶ ಕೂಡಲಗಿ, ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ , ಮುಖಂಡ ವಿಜಯ ಗದ್ದನಕೇರಿ ಮಾತನಾಡಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ಜೊಯಿಡಾದ ಶಿಕ್ಷಕ ವಿಷ್ಣು ಪಟಗಾರ ಮಾತನಾಡಿ, ದೇಹ ಮತ್ತು ಮನಸ್ಸಿನ ಸಂಬಂಧ ಕಡಿಮೆ ಆಗುತ್ತಿದೆ. ಅವುಗಳು ಎರಡೂ ಕೂಡಿದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ತುಂಬಿದ ಕೊಡಗಳಾಗಿ ಶಿಕ್ಷಕರು ಹೊರಹೊಮ್ಮಬೇಕು ಎಂದರು.

ಕಳೆದ ವರ್ಷ ನಿವೃತ್ತರಾದ ಶಿಕ್ಷಕರಿಗೆ ಆತ್ಮೀಯವಾಗಿ ಸತ್ಕರಿಸಲಾಯಿತು. ನಗರದ ಎಸ್. ಆರ್. ಕೆ. ಪ್ರತಿಷ್ಠಾನ ವತಿಯಿಂದ 23 ಶಿಕ್ಷಕರಿಗೆ ಸನ್ಮಾನಿಸಲಾಯಿತು.

ಮುತ್ತಣ್ಣ ಕಲ್ಗುಡಿ, ನಗರಸಭೆ ಉಪಾಧ್ಯಕ್ಷೆ ಕಾಳಮ್ಮ ಜಕ್ಕಾ, ಅಮೀನಗಡ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಬೇಬಿ ಚವಾಣ್, ವಿವಿಧ ಸಮಿತಿ ಸದಸ್ಯರು ಇದ್ದರು.

ಕೂಡಲಸಂಗಮ ಶಾಲೆ ವಿದ್ಯಾರ್ಥಿಗಳು ವಚನನೃತ್ಯ ಮಾಡಿದರು. ಇಳಕಲ್ಲ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಂದ ನಾಡಗೀತೆ ನಡೆದವು. ಸದಾಶಿವ ಗುಡಗುಂಟಿ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಬಲಕುಂದಿ ನಿರೂಪಿಸಿದರು. ಕೆ.ಎಚ್. ಗೌಡರ ವಂದಿಸಿದರು.