ಮೈಸೂರು: ಎಚ್.ಡಿ. ಕೋಟೆಯ ಕಬಿನಿ ಜಲಾಶಯದ ಮುಂಭಾಗದಲ್ಲಿ ಉದ್ಯಾನ ನಿರ್ಮಾಣ ಕಾಮಗಾರಿಗೆ ಪ್ರಸಕ್ತ ವರ್ಷ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕಬಿನಿ ಜಲಾಶಯಕ್ಕೆ ಬುಧವಾರ ಬಾಗಿನ ಅರ್ಪಿಸಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಬಿನಿ ಉದ್ಯಾನವನ್ನು ಸರ್ಕಾರದಿಂದ ನಿರ್ಮಾಣ ಮಾಡಬೇಕೇ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಬೇಕೇ ಎಂಬ ಕುರಿತು ಗೊಂದಲ ಇದೆ. ಗೊಂದಲವನ್ನು ಆದಷ್ಟು ಬೇಗ ಪರಿಹರಿಸಿ ಪ್ರಸಕ್ತ ವರ್ಷದಲ್ಲಿಯೇ ಉದ್ಯಾನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಕಾವೇರಿ ಜಲಾನಯ ಅಭಿವೃದ್ಧಿಗೆ ನಾನು ಜಲಸಂಪನ್ಮೂಲ ಸಚಿವನಾಗಿದ್ದ ಸಂದರ್ಭದಲ್ಲಿಯೇ ಹಲವಾರು ಕ್ರಮಗಳನ್ನು ಕೈಗೊಂಡಿದ್ದೆ. ಕೆಆರ್‌ಎಸ್ ಅಣೆಕಟ್ಟೆಗೆ ನೂತನ ಗೇಟ್ ನಿರ್ಮಾಣ ಹಾಗೂ ಕಾಲುವೆಗಳ ವಿಸ್ತರಣೆ ಕಾರ್ಯವನ್ನು ಕೈಗೊಂಡಿದ್ದೆ. ಆ ಕಾಮಗಾರಿಗಳನ್ನು ಇದೀಗ ಮತ್ತಷ್ಟು ವಿಸ್ತರಿಸಲಾಗುತ್ತಿದೆ. ಕಟ್ಟಕಡೆಯ ರೈತನ ಜಮೀನಿಗೆ ನೀರು ದೊರೆಯಬೇಕು ಎಂಬ ಉದ್ದೇಶದಿಂದ ಕಾಲುವೆಗಳ ವಿಸ್ತರಣೆ ಹಾಗೂ ಆಧುನೀಕರಣ ಮಾಡುತ್ತಿದ್ದೇವೆ. ಕೆಆರ್‌ಎಸ್, ಕಬಿನಿ, ಹೇಮಾವತಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾಗಿರುವ ಕಾಮಗಾರಿಗಳ ಸಮಗ್ರ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದ್ದು, ವರದಿ ಬಂದ ನಂತರ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.