ಗಂಗಾವತಿ: ತಾಲೂಕಿನ ಆನೆಗೊಂದಿಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಸಾರ್ವಜನಿಕ ಶೌಚಗೃಹ ನಿರ್ಮಾಣಕ್ಕೆ ಗುರುವಾರ ಜಾಗ ಪರಿಶೀಲಿಸಿದ್ದು, ಶೀಘ್ರವೇ ಕಾಮಗಾರಿ ಆರಂಭಿಸುವಂತೆ ಒಂದನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಗ್ರಾಪಂಗೆ ಸೂಚಿಸಿದ್ದಾರೆ.
ಶೌಚಗೃಹ ನಿರ್ಮಾಣಕ್ಕಾಗಿ ಗ್ರೀನ್ ಕಿಷ್ಕಿಂಧಾ, ಸೇವ್ ಕಿಷ್ಕಿಂಧಾ ಪ್ರತಿನಿಧಿ ಡಿ.ಸಿಂಧೂ ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆಸಿದ್ದು, ನಿರ್ಲಕ್ಷಿಸಿದರೆ ಧರಣಿ ಹಮ್ಮಿಕೊಳ್ಳಲು ನಿರ್ಧರಿಸಿದ್ದರು. ವಿಷಯ ಅರಿತ ಜೆಎಂಎ್ಸಿ ಒಂದನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ ಗಾಣಿಗೇರ್ ಆನೆಗೊಂದಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಗ್ರಾಪಂ ಸಿಬ್ಬಂದಿಯೊಂದಿಗೆ ಸ್ಥಳ ಪರಿಶೀಲಿಸಿದರು. ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆಯುಳ್ಳ ಆನೆಗೊಂದಿ ಭಾಗದಲ್ಲಿ ಶೌಚಗೃಹ ಇಲ್ಲದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.
ಗ್ರಾಪಂ ಅಧ್ಯಕ್ಷೆ ಮಹಾದೇವಿ ಬಾಳಿಕಾಯಿ, ಸದಸ್ಯರಾದ ತಿಮ್ಮಪ್ಪ, ಮಲ್ಲಿಕಾರ್ಜುನಸ್ವಾಮಿ, ಹೊನ್ನೂರಪ್ಪ ನಾಯಕ, ಮೌನೇಶ ಸುಬೇದಾರ್, ಗ್ರೀನ್ ಕಿಷ್ಕಿಂಧಾ, ಸೇವ್ ಕಿಷ್ಕಿಂಧಾ ಪ್ರತಿನಿಧಿ ಡಿ.ಸಿಂಧೂ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಡಾ.ಕೆ.ವೆಂಕಟೇಶಬಾಬು, ದೇವೇಂದ್ರಪ್ಪ ಇತರರಿದ್ದರು.