ಬಾಳೆಹೊನ್ನೂರಿನ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಪ್ರತಿಷ್ಠಾಪಿಸಲಿರುವ ದುರ್ಗಾ ವಿಗ್ರಹ ನಿರ್ಮಾಣ ಕಾರ್ಯಕ್ಕೆ ಧಾರ್ಮಿಕ ಕಾರ್ಯಗಳೊಂದಿಗೆ ಚಾಲನೆ ನೀಡಲಾಯಿತು. ಆರ್.ಡಿ.ಮಹೇಂದ್ರ, ಬಿ.ಚನ್ನಕೇಶವ, ಪ್ರಭಾಕರ್ ಪ್ರಣಸ್ವಿ, ಮಣಿಕಂಠ ಇದ್ದರು. 
ಜಿಲ್ಲೆ

ದುರ್ಗಾದೇವಿ ವಿಗ್ರಹ ನಿರ್ಮಾಣಕ್ಕೆ ಚಾಲನೆ

ಎಸ್.ಎನ್.ರವೀಂದ್ರ

ಬಾಳೆಹೊನ್ನೂರು: ಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ನಾಡಹಬ್ಬ ದಸರಾ ಅಂಗವಾಗಿ ಪ್ರತಿಷ್ಠಾಪಿಸುವ ಶ್ರೀ ದುರ್ಗಾಪರಮೇಶ್ವರಿ ವಿಗ್ರಹ ನಿರ್ಮಾಣ ಕಾರ್ಯಕ್ಕೆ ಭಾನುವಾರ ರೇಣುಕನಗರದ ಶ್ರೀಶಾಸ್ತ ಕಲಾಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಚಾಲನೆ ನೀಡಲಾಯಿತು.

ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಮಾಹಿತಿ ನೀಡಿ, ಅ.3ರಿಂದ 12ರವರೆಗೆ 15ನೇ ವರ್ಷದ ದುರ್ಗಾದೇವಿ ನವರಾತ್ರಿ ಮಹೋತ್ಸವವನ್ನು ವಿಜೃಂಭಣೆಯಿಂದ ನಡೆಸಲಾಗುವುದು. 10 ದಿನ ದುರ್ಗಾದೇವಿಯ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ತ್ರಿಕಾಲ ಪೂಜೆ, ನಿತ್ಯ ಸಂಜೆ ವೈವಿಧ್ಯಮಯ ಧರ್ಮ, ಕಲೆ, ಸಂಸ್ಕೃತಿ ಬಿಂಬಿತ ಸಾಂಸ್ಕೃತಿಕ ಕಾರ್ಯಕ್ರಮಗಳು ದುರ್ಗಾ ಮಂಟಪದಲ್ಲಿ ನಡೆಯಲಿವೆ ಎಂದರು.
ಆಯುಧಪೂಜೆ ದಿನ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ವಿಜಯದಶಮಿಯ ಅಂತಿಮ ದಿನ ವಿವಿಧ ಆಕರ್ಷಣೆಗಳೊಂದಿಗೆ 15ಕ್ಕೂ ಹೆಚ್ಚು ಕಲಾತಂಡಗಳೊಂದಿಗೆ ಪಟ್ಟಣದಲ್ಲಿ ವೈಭವಯುತವಾದ ಮೆರವಣಿಗೆ ನಡೆಸಿ ಭದ್ರಾ ನದಿಯಲ್ಲಿ ದುರ್ಗಾದೇವಿ ವಿಗ್ರಹವನ್ನು ಜಲಸ್ತಂಭನಗೊಳಿಸಲಾಗುವುದು ಎಂದು ತಿಳಿಸಿದರು.
ಸಮಿತಿ ಕಾರ್ಯಾಧ್ಯಕ್ಷ ಬಿ.ಚನ್ನಕೇಶವ ಬರಗಲ್, ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ವಿಗ್ರಹ ಶಿಲ್ಪಿ ಮಣಿಕಂಠ ಇತರರಿದ್ದರು.