ಜಮಖಂಡಿ: ಸಾರಿಗೆ ಸಂಸ್ಥೆಗಳಲ್ಲಿ ಒಂದು ಸಾವಿರ ಚಾಲಕರು, ನಿರ್ವಾಹಕರ ನೇಮಕಾತಿ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಈಗಾಗಲೇ ಒಂದು ಸಾವಿರ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸಿಬ್ಬಂದಿ ಕೊರತೆ ಉಂಟಾಗುವುದಿಲ್ಲ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ತಾಲೂಕಿನ ಸಾವಳಗಿ ಗ್ರಾಮದಲ್ಲಿ ನೂತನ ಬಸ್ ನಿಲ್ದಾಣವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಿಬ್ಬಂದಿ ಅಪಘಾತ ಪರಿಹಾರವನ್ನು ನಾವು ಒಂದು ಕೋಟಿ ರೂ.ಗೆ ಹೆಚ್ಚಿಸಿದ್ದೇವೆ. ಇಷ್ಟು ದೊಡ್ಡ ಮೊತ್ತವನ್ನು ಆರ್ಮಿಯಲ್ಲೂ ನೀಡುವುದಿಲ್ಲ. ಹೊಸ ಬಸ್‌ಗಳನ್ನು ಖರೀದಿಸುತ್ತಿದ್ದೇವೆ. ಸಾರಿಗೆ ಇಲಾಖೆಯನ್ನು ಬಹಳಷ್ಟು ಸುಧಾರಣೆ ಮಾಡುತ್ತಿದ್ದೇವೆ ಎಂದರು.
ಸಾವಳಗಿಯಲ್ಲಿ ಡಿಪೋ ನಿರ್ಮಿಸಲು ಜಾಗ ನೀಡಿದರೆ ಆದ್ಯತೆ ಅನುಸಾರವಾಗಿ ನಿರ್ಮಿಸಲಾಗುವುದು ಎಂದರು.
ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾತನಾಡಿ, ಮುಂದಿನ ದಿನಗಳಲ್ಲಿ ಸಾವಳಗಿ ತಾಲೂಕು ಕೇಂದ್ರವಾಗುತ್ತದೆ. ಆ ನಿಟ್ಟಿನಲ್ಲಿ ಇಲ್ಲಿ ಡಿಪೋ ಸ್ಥಾಪಿಸಬೇಕು. ಜಮಖಂಡಿ ಬಸ್ ನಿಲ್ದಾಣ ಬಹಳಷ್ಟು ರಿಪೇರಿ ಕಾರ್ಯವಾಗಬೇಕಿದೆ. ಮಳೆಗಾಲದಲ್ಲಿ ಬಸ್ ನಿಲ್ದಾಣ ಆವರಣದಲ್ಲಿ ನೀರು ನಿಲ್ಲುತ್ತಿದೆ. ಜಮಖಂಡಿಯಿಂದ ಬೆಂಗಳೂರು ಕೇಂದ್ರ ಸ್ಥಾನಕ್ಕೆ ತೆರಳಲು ಎಸಿ ಬಸ್, ಪಲ್ಲಕ್ಕಿ ಸೇರಿ 4 ಬಸ್‌ಗಳನ್ನು ನೀಡಬೇಕು ಎಂದರು.
ಕಾಗವಾಡ ಶಾಸಕ ರಾಜು ಕಾಗೆ, ವಾಕಸಾಸಂಸ್ಥೆ ಉಪಾಧ್ಯಕ್ಷ ಪೀರಸಾಬ್ ಕೌತಾಳ, ಗ್ರಾಪಂ ಅಧ್ಯಕ್ಷೆ ಕವಿತಾ ಪಾಟೋಳಿ ಇದ್ದರು. ಜಿಲ್ಲಾ ಸಾರಿಗೆ ಅಧಿಕಾರಿ ಪಿ.ವಿ.ಮೇತ್ರಿ ಸ್ವಾಗತಿಸಿದರು.