ಜಿಲ್ಲೆ

ನರೇಗಾದಡಿ ಗೋ ಶಾಲೆ ನಿರ್ಮಾಣ : ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಿಸಿದ ರಾಮಕುಂಜ ಗ್ರಾಪಂ ರಾಜ್ಯದಲ್ಲೇ ಪ್ರಥಮ

ಸೌಮ್ಯ ಆರ್

ಕಡಬ: ರಾಮಕುಂಜ ಗ್ರಾಮ ಪಂಚಾಯಿತಿ ವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅಂದಾಜು 28 ಲಕ್ಷ ರೂ.ವೆಚ್ಚದಲ್ಲಿ ರಾಮಕುಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಕುಲ ನಗರದಲ್ಲಿ ನಿರ್ಮಾಣಗೊಂಡ ಜಿಲ್ಲಾ ಸಮುದಾಯ ಗೋ ಶಾಲಾ ಕಟ್ಟಡವನ್ನು ಮಂಗಳವಾರ ಉದ್ಗಾಟಿಸಲಾಯಿತು. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗೋ ಶಾಲೆ ನಿರ್ಮಾಣಗೊಂಡಿರುವುದು ರಾಜ್ಯದಲ್ಲೇ ಇದು ಪ್ರಥಮ ಎನ್ನಲಾಗಿದೆ.

ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕಡಬ ತಾಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ, ಪಶುಸಂಗೋಪನೆ ಇಲಾಖೆ ಮಾಜಿ ಸಚಿವ ಪ್ರಭು ಚೌಹಾಣ್ ಶಿಲಾನ್ಯಾಸ ಮಾಡಿದ್ದರು. ಉದ್ಯೋಗ ಖಾತ್ರಿ ಯೋಜನೆಯಡಿ ಈ ಗೋ ಶಾಲೆ ಕಾಮಗಾರಿ ನಡೆದಿದೆ. ಔಷಧೀಯ ಗುಣವುಳ್ಳ ಗೋವುಗಳಿಂದಾಗಿ ನಾವಿದ್ದೇವೆ. ನರೇಗಾ ಯೋಜನೆಯಡಿ ಗೋ ಶಾಲೆ ನಿರ್ಮಾಣ ಆಗಿರುವುದು ಇದೇ ಪ್ರಥಮವಾಗಿದೆ. ಕಾಮಗಾರಿ ಅನುಷ್ಠಾನದಲ್ಲಿ ನೂರಾರು ಸವಾಲುಗಳಿದ್ದರೂ ಈ ದೊಡ್ಡಮಟ್ಟದ ಕಾಮಗಾರಿಯನ್ನು ಗ್ರಾಮ ಪಂಚಾಯಿತಿ ಯಶಸ್ವಿಯಾಗಿ ನಿಭಾಯಿಸಿದೆ ಎಂದರು.

ಗೋ ಶಾಲಾ ಕಟ್ಟಡವನ್ನು ರಾಮಕುಂಜ ಗ್ರಾಪಂ ಅಧ್ಯಕ್ಷೆ ಸುಚೇತಾ ಬಿ.ಉದ್ಘಾಟಿಸಿ ಮಾತನಾಡಿ, ಗೋವುಗಳನ್ನು ನಾವು ದೇವರೆಂದು ಪೂಜಿಸುತ್ತೇವೆ. ಅಶಕ್ತ ಗೋವುಗಳ ಸೇವೆ ಪುಣ್ಯದ ಕೆಲಸ. ಉದ್ಯೋಗ ಖಾತ್ರಿ ಯೋಜನೆಯಡಿ ಮುಂದೆಯೂ ಇಂತಹ ಸಮುದಾಯ ಆಧಾರಿತ ಅಭಿವೃದ್ಧಿ ಕೆಲಸ ಆಗಬೇಕು ಎಂದರು.

ಗೋ ಪೂಜೆ: ಗೋ ಶಾಲೆ ಉದ್ಘಾಟನೆಗೂ ಮೊದಲು ಗೋ ಶಾಲೆಯಲ್ಲಿ ಗೋ ಪೂಜೆ ನಡೆಯಿತು. ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಸಹಾಯಕ ಅರ್ಚಕ ಶ್ರೀನಿಧಿ ಭಟ್ ಗೋ ಪೂಜೆ ನೆರವೇರಿಸಿದರು.

ಕಡಬ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಅಜಿತ್ ಕುಮಾರ್ ಮಾತನಾಡಿದರು. ಕಡಬ ತಾ.ಪಂ. ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಸಂದೇಶ್ ಎಂ. ರಾಮಕುಂಜ ನಿವೃತ್ತ ಪಿಡಿಒ ಜೆರಾಲ್ಡ್ ಮಸ್ಕರೇನಸ್ , ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೇಶವ್ ಗಾಂಧಿ ಪೇಟೆ, ಇಂಜಿನಿಯರ್ ಮನೋಜ್ ಕುಮಾರ್, ಗುತ್ತಿಗೆದಾರ ಯೋಗೀಶ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಲಲಿತಾ ಜಿ.ಡಿ.ಸ್ವಾಗತಿಸಿ, ನಿರೂಪಿಸಿದರು. ಪಿಡಿಒ ಮೋಹನ್ ಕುಮಾರ್ ವಂದಿಸಿದರು.

ಸಹಕರಿಸಿದವರಿಗೆ ಸನ್ಮಾನ

ಸಮುದಾಯ ಗೋ ಶಾಲೆ ಅನುಷ್ಠಾನಕ್ಕೆ ಸಹಕಾರ ನೀಡಿದ ತಾ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ, ನಿವೃತ್ತ ಪಿಡಿಒ ಜೆರಾಲ್ಡ್ ಮಸ್ಕರೇನಸ್, ಇಂಜಿನಿಯರ್ ಮನೋಜ್ ಕುಮಾರ್, ಗುತ್ತಿಗೆದಾರ ಯೋಗೀಶ್ ಕುಮಾರ್ ಅಜ್ಜಿಕುಮೇರು, ಗ್ರಾಮ ಪಂಚಾಯಿತಿ ಡಾಟಾ ಎಂಟ್ರಿ ಆಪರೇಟರ್ ವನಿತಾ, ಕಡಬ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಅಜಿತ್ ಕುಮಾರ್, ಗೋ ಶಾಲೆ ಸಿಬ್ಬಂದಿ ನಿತಿನ್ ರಾಮಕುಂಜ, ನಿತಿನ್ ಬಾಜಳ್ಳಿ, ನವೀನ್ ರಾಮಕುಂಜ, ಜನಾರ್ದನ ಆಚಾರ್ಯ ಕೊಯಿಲ, ರಮೇಶ್ ಕೊಯಿಲ ಅವರನ್ನು ರಾಮಕುಂಜ ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು.

ಇಲ್ಲಿ ಗೋ ಶಾಲೆ ಆರಂಭಗೊಂಡು ಎರಡು ವರ್ಷ ಆಗಿದೆ. ಈಗ ಉದ್ಘಾಟನೆಗೊಂಡಿರುವುದು 2ನೇ ಕಟ್ಟಡ. ಇದರಲ್ಲಿ 60 ಜಾನುವಾರು ಕಟ್ಟಲು ಅವಕಾಶವಿದೆ. ಈ ಹಿಂದೆ ರಾಜ್ಯ ಸರ್ಕಾರ ಜಿಲ್ಲೆಗೊಂದು ಗೋ ಶಾಲೆ ಮಂಜೂರು ಮಾಡಿತ್ತು. ಆದರೆ ಉದ್ಯೋಗ ಖಾತ್ರಿ ಯೋಜನೆಯಡಿ ರಾಜ್ಯದ ಎಲ್ಲಿಯೂ ಗೋ ಶಾಲೆ ಆಗಿಲ್ಲ. ಕಡಬ ತಾಲೂಕಿನ ರಾಮಕುಂಜದಲ್ಲೇ ಪ್ರಥಮ. ಇದು ಹೆಮ್ಮೆಯ ವಿಚಾರ ಎಂದರು. ಡಾ.ಅಜಿತ್ ಕುಮಾರ್, ಕಡಬ ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ