ಬೆಂಗಳೂರು: ರಾಜಧಾನಿಯಲ್ಲಿ ಬಿಬಿಎಂಪಿಯು ಅನಧಿಕೃತ ಕಟ್ಟಡಗಳ ಸಮೀಕ್ಷೆ ನಡೆದಿರುವಾಗಲೇ, ಹೊಸ ಕಟ್ಟಡವೊಂದಕ್ಕೆ ನಕಲಿ ನಕ್ಷೆ ಸೃಷ್ಟಿಸಿ ನಿಯಮಕ್ಕಿಂತ ಹೆಚ್ಚಿನ ಮಹಡಿಗಳನ್ನು ನಿರ್ಮಿಸಿರುವ ಪ್ರಕರಣವನ್ನು ಪಾಲಿಕೆ ಅಧಿಕಾರಿಗಳು ಬುಧವಾರ ಪತ್ತೆ ಹಚ್ಚಿದ್ದಾರೆ.
ರಾಜರಾಜೇಶ್ವರಿನಗರ ವಲಯದ ಮಲ್ಲತಹಳ್ಳಿಯಲ್ಲಿ ಪಾಲಿಕೆ ನೀಡಿರುವ ನಕ್ಷೆಗೆ ವ್ಯತಿರಿಕ್ತವಾಗಿ ನಕಲಿ ನಕ್ಷೆ ಸಿದ್ದಪಡಿಸಿಕೊಂಡು ಕಟ್ಟಡ ನಿರ್ಮಿಸಲಾಗಿದೆ. ಇದು ದೃಢಪಟ್ಟಿದ್ದು, ತಪ್ಪಿತಸ್ಥರ ವಿರುದ್ಧ ಪಾಲಿಕೆ ಅಧಿಕಾರಿಗಳು ಎಫ್ಐಆರ್ ದಾಖಲಿಸಿ ಬಿಸಿ ಮುಟ್ಟಿಸಿದ್ದಾರೆ.
ಮಲ್ಲತಹಳ್ಳಿ ಗ್ರಾಮದಲ್ಲಿ ಸ್ವತ್ತಿನ ಮಾಲೀಕ ಜಿ. ಲಕ್ಷ್ಮಿ ಪ್ರಸಾದ್ ಜಿಪಿಎ ಹೋಲ್ಡರ್ ಆಗಿದ್ದು, ಮೆ. ಲ್ಯಾಕ್ವೆನ್ ಡೆವಲಪರ್ಸ್ ಪಾಲುದಾರ ಡಿ.ಹರ್ದೀಪ್ ಹಾಗೂ ಎ.ವಿಜಯಕುಮಾರ್‌ಗೆ ಮಂಜೂರಾತಿ ನಕ್ಷೆ ನೀಡಿಲಾಗಿದೆ. ನೆಲಮಹಡಿ ಸೇರಿ 3 ಅಂತಸ್ತು ನಿರ್ಮಿಸುವ ಬದಲು ಆರು ಮಹಡಿಗಳನ್ನು ನಿರ್ಮಿಸಲಾಗಿದೆ.
ತೆರವಿಗೆ ನೋಟಿಸ್ ಜಾರಿ:
ಅಧಿಕಾರಿಗಳು ಸ್ಥಳಪರಿಶೀಲನೆ ನಡೆಸಿದಾಗ ನಿಗದಿಗಿಂತ 3 ಮಹಡಿಗಳನ್ನು ಹೆಚ್ಚುವರಿಯಾಗಿ ನಿರ್ಮಿಸಿರುವುದು ಪತ್ತೆಯಾಗಿದೆ. ಜತೆಗೆ ಹೆಚ್ಚುವರಿ ಭಾಗದ ನಿರ್ಮಾಣಕ್ಕೆ ಪಾಲಿಕೆಯ ನಗರ ಯೋಜನೆಯ ಸಹಾಯಕ ನಿರ್ದೇಶಕರು ಒಪ್ಪಿಗೆ ನೀಡಿದ್ದಾರೆ ಎಂದು ಬಿಂಬಿಸುವಂತೆ ನಕಲಿ ನಕ್ಷೆ ತಯಾರಿಸಿಕೊಂಡು ಒಟ್ಟು 20 ಘಟಕಗಳನ್ನು ನಿರ್ಮಿಸಲಾಗಿದೆ. ಮಂಜೂರಾತಿ ನೀಡಿರುವ ಅಧಿಕಾರಿಯ ಹೆಸರು ತಾಳೆಯಾಗದ ಕಾರಣ ಮರಾಮರ್ಶೆ ನಡೆಸಿದಾಗ ತಪ್ಪು ಸಾಬೀತಾಗಿದೆ.
ನಕಲಿ ನಕ್ಷೆ ತಯಾರಿಸಿ ಪಾಲಿಕೆಗೆ ಮೋಸ ಮಾಡಿರುವುದು ಹಾಗೂ ಹೆಚ್ಚುವರಿ ಭಾಗವನ್ನು ತೆರವುಗೊಳಿಸಲು ಪಾಲಿಕೆ ನೋಟೀಸ್ ನೀಡಿದೆ ಎಂದು ಆರ್.ಆರ್.ನಗರ ವಲಯ ಆಯುಕ್ತ ಬಿ.ಸಿ.ಸತೀಶ್ ತಿಳಿಸಿದ್ದಾರೆ.