ಜಿಲ್ಲೆ

ಬಾಸೆಲ್ ಮಿಶನ್ ಬಾಲಕರ ಪ್ರೌಢಶಾಲೆಗೆ ಸಭಾಭವನ ನಿರ್ಮಾಣ

ಧಾರವಾಡ: ಜರ್ಮನ್ ಮಿಷನರಿಗಳ ಸಹಾಯದಿಂದ 1863ರಲ್ಲಿ ಸ್ಥಾಪಿಸಲ್ಪಟ್ಟ ಧಾರವಾಡದ ಪ್ರಥಮ ಶಾಲೆ ಬಾಸೆಲ್ ಮಿಶನ್ ಬಾಲಕರ ಪ್ರೌಢಶಾಲೆ. 162 ವರ್ಷಗಳ ಇತಿಹಾಸ ಹೊಂದಿರುವ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಡಾ. ಎಂ.ಎಸ್. ಪಾಟೀಲ ಹಾಗೂ ಸುನೀಲ ಪಿ. ರಂಗರೇಜಿ ಅವರು ಶಾಲೆಗೆ ಸುಸಜ್ಜಿತ ಸಭಾಭವನ, ಶೌಚಗೃಹ ನಿರ್ಮಿಸಿ, ಡೆಸ್ಕ್ಗಳನ್ನು ದೇಣಿಗೆ ನೀಡಿದ್ದಾರೆ.

ಗದಗ ಜಿಲ್ಲೆ ಬೆಳವಣಕಿಯ ಡಾ. ಎಂ.ಎಸ್. ಪಾಟೀಲ 1953ರಿಂದ 1963ರವರೆಗೆ ಬಾಸೆಲ್ ಮಿಶನ್ ಬಾಲಕರ ಪ್ರೌಢಶಾಲೆಯಲ್ಲಿ 5ರಿಂದ 10ನೇ ತರಗತಿ ಓದಿದ್ದಾರೆ. ಹುಬ್ಬಳ್ಳಿಯ ಕೆಎಂಸಿಯಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಿ 2022ರವರೆಗೆ ಅಮೆರಿಕದ ಚಿಕಾಗೊದ ಪ್ರತಿಷ್ಠಿತ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ವೃತ್ತಿ ನಿರ್ವಹಿಸಿ ನಿವೃತ್ತರಾಗಿ ಅಲ್ಲೇ ನೆಲೆಸಿದ್ದಾರೆ. ಭಾರತಕ್ಕೆ ಬಂದಾಗೊಮ್ಮೆ ತಾವು ಕಲಿತ ಶಾಲೆಗೆ ಭೇಟಿ ನೀಡುತ್ತಾರೆ. ಭವಿಷ್ಯ ರೂಪಿಸಿಕೊಳ್ಳಲು ಮೆಟ್ಟಿಲಾದ ಶಾಲೆಯ ಬಗ್ಗೆ ಪಾಟೀಲರಿಗೆ ಅಪಾರ ಕಾಳಜಿ. ಶಾಲೆಯ ಹಳೆಯ ವರ್ಗಕೋಣೆ ಮತ್ತು ಲ್ಯಾಬೋರೇಟರಿ ಇದ್ದ ಹಂಚಿನ ಕೊಠಡಿಗಳಿಗೆ ಕಾಂಕ್ರೀಟ್ ಮೇಲ್ಛಾವಣಿ ಹಾಕಿಸಿ ಸುಸಜ್ಜಿತ ಸಭಾಭವನ ಮಾಡಿಸಿದ್ದಾರೆ.

ಈ ಕಾರ್ಯಕ್ಕೆ ಇನ್ನೋರ್ವ ಹಳೆಯ ವಿದ್ಯಾರ್ಥಿ ಧಾರವಾಡದ ಸುನೀಲ ರಂಗರೇಜಿ ಕೈ ಜೋಡಿಸಿದ್ದಾರೆ. 1980- 1987ರವರೆಗೆ ಶಾಲೆಯಲ್ಲಿ ಓದಿದರುವ ಇವರು, ಎಸ್‌ಡಿಎಂ ಕಾಲೇಜಿನಲ್ಲಿ ಇಂಜಿನಿಯರ್ ಪದವಿ ಪೂರೈಸಿ ವಿದೇಶಗಳಲ್ಲಿ ಎಂಬಿಎ ಪದವಿ ಪಡೆದು ದೇಶ- ವಿದೇಶಗಳ ಪ್ರತಿಷ್ಠಿತ ಕಂಪನಿಗಳಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಪ್ರಸ್ತುತ ಸಿಎಲ್‌ಟಿ ಇಂಡಿಯಾದಲ್ಲಿ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲೆಯ ಜೀರ್ಣೋದ್ಧಾರ ಕಾರ್ಯಕ್ಕೆ ಕೈ ಜೋಡಿಸಿದ್ದಲ್ಲದೆ, ಸ್ಮಾರ್ಟ್ ಕ್ಲಾಸ್‌ನ ಮಹತ್ವ ಅರಿತು ಸಭಾಭವನದಲ್ಲಿ ಸ್ಮಾರ್ಟ್ ಬೋರ್ಡ್ ಅಳವಡಿಲು ಮುಂದಾಗಿದ್ದಾರೆ. 4 ವರ್ಷಗಳಿಂದ ಶಾಲೆಯ ಹಾಸ್ಟೆಲ್‌ನಲ್ಲಿರುವ ಬಡ ಮಕ್ಕಳ ಶುಲ್ಕ ಭರಿಸುತ್ತಿದ್ದಾರೆ. ತಮ್ಮ ತಾಯಿ ಪುಷ್ಪಾ ಅವರ ಹೆಸರಲ್ಲಿ ಡೆಸ್ಕ್ಗಳನ್ನು ದೇಣಿಗೆ ನೀಡಿದ್ದಾರೆ.

ಕಲಿತ ಶಾಲೆಯನ್ನು ಮರೆಯದೆ, ಅದರ ಅಭಿವೃದ್ಧಿಗೆ ನೆರವಾಗುತ್ತಿರುವ ಇಬ್ಬರ ಕಾರ್ಯವನ್ನು ಶಾಲೆಯ ಮುಖ್ಯಾಧ್ಯಾಪಕರು, ಶಿಕ್ಷಕವೃಂದ ಶ್ಲಾಘಿಸಿದೆ.