ಬೇಲೂರು: ಬೇಲೂರು ಪಟ್ಟಣ ಸಮೀಪವಿರುವ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ತನ್ನದೇ ಆದ ಇತಿಹಾಸವಿದ್ದು, ಇಲ್ಲಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಳಾಂಗಣದಲ್ಲಿ ಸಭಾಂಗಣ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಪಟ್ಟಣ ಸಮೀಪದ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಭಾಂಗಣ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಆಟ, ಪಾಠ ಸೇರಿದಂತೆ ಇನ್ನಿತರ ಚಟುವಟಿಕೆಗಳು ಹಾಗೂ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ 15 ಲಕ್ಷ ರೂ.ಯೋಜನೆಯಡಿ ಕೆಲಸ ಆಡಿಟೋರಿಯಂ ನಿರ್ಮಿಸಲಾಗುತಿದ್ದು, ಮುಂದಿನ ಒಂದೂವರೆ ತಿಂಗಳೊಳಗೆ ಕಾಮಗಾರಿ ಮುಗಿಯಲಿದೆ. ನಂತರ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಅಲ್ಲದೆ ತಾಲೂಕಿನ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 4.20 ಕೋಟಿ ರೂ. ವೆಚ್ಚದಲ್ಲಿ ಇದೇ ಕಾಲೇಜು ಆವರಣದಲ್ಲೇ ಬೃಹತ್ ಕಲಾಮಂದಿರ ನಿರ್ಮಾಣಕ್ಕೂ ಈಗಾಗಲೇ ಎಲ್ಲ ಸಿದ್ಧತೆ ನಡೆದಿದ್ದು, ಕೆಲವೇ ದಿನಗಳಲ್ಲಿ ಇದಕ್ಕೂ ಭೂಮಿ ಪೂಜೆ ನೆರವೇರಿಸಲಾಗುವುದು. ಇದರೊಂದಿಗೆ ಕ್ಷೇತ್ರದ ಜನರಿಗೆ ಅಗತ್ಯವಾಗಿ ಬೇಕಿರುವ ಎಲ್ಲ ಸೌಲಭ್ಯಗಳು ದೊರಕುವಂತೆ ಮಾಡಲು ಸಂಬಂಧಿಸಿದ ಸಚಿವರು, ಅಧಿಕಾರಿಗಳೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ಹಂತ ಹಂತವಾಗಿ ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿಸಲಾಗುವುದು ಎಂದರು.
ಲೋಕೋಪಯೋಗಿ ಇಲಾಖೆ ಎಇಇ ಕೃಷ್ಣೇಗೌಡ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಇತರ ಚಟುವಟಿಕೆ ಹಾಗೂ ಕಾರ್ಯಕ್ರಮಗಳಿಗೆ ಬಳಕೆಯಾಗುವಂತೆ ಸಭಾಂಗಣ ನಿರ್ಮಿಸಲಾಗುತ್ತಿದೆ ಎಂದರು.
ಕಾಲೇಜು ಪ್ರಾಂಶುಪಾಲ ಡಾ.ಮಹೇಶ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ವೈ.ಎಸ್.ಸಿದ್ದೇಗೌಡ, ಹೆಬ್ಬಾಳು ಹಾಲಪ್ಪ, ಅಜಿತ್, ಉಪನ್ಯಾಸಕರಾದ ವೀರಭದ್ರಪ್ಪ, ಬಾಬು ಪ್ರಸಾದ್ ಸೇರಿದಂತೆ ಇತರರಿದ್ದರು.