ಯಳಂದೂರಿನಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ನಿರ್ಮಿಸಿರುವ ಗಣೇಶ ವಿಗ್ರಹಗಳನ್ನು ವಿಸರ್ಜಿಸಲು ತಾತ್ಕಾಲಿಕವಾಗಿ ನಿರ್ಮಿಸಿರುವ ಕೃತಕ ಹೊಂಡ. 
ಜಿಲ್ಲೆ

ಮೂರ್ತಿ ವಿಸರ್ಜಿಸಲು ತಾತ್ಕಾಲಿಕ ಹೊಂಡ ನಿರ್ಮಾಣ

ಅಭಿನಯ್ ಎಚ್.ಎಂ

ಯಳಂದೂರು: ಪಟ್ಟಣದ ವಿವಿಧೆಡೆ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಪಟ್ಟಣ ಪಂಚಾಯಿತಿ ವತಿಯಿಂದ ಪಂಚಾಯಿತಿ ಕಚೇರಿ ಬಳಿ ತಾತ್ಕಾಲಿಕ ಹೊಂಡ ನಿರ್ಮಿಸಲಾಗಿದೆ.

ಹಲವು ವರ್ಷಗಳಿಂದ ಹೊಂಡ ನಿರ್ಮಾಣ ಮಾಡಲಾಗುತ್ತಿದೆ. ನದಿ, ಕೆರೆಗಳನ್ನು ಭವಿಷ್ಯತ್ತಿಗೆ ಉಳಿಸುವ ನಿಟ್ಟಿನಲ್ಲಿ ಈ ಬಾರಿ ಪರಿಸರ ಸ್ನೇಹಿ ಗಣೇಶ ವಿಗ್ರಹ ಪ್ರತಿಷ್ಠಾಪಿಸಲು ಅನುಮತಿ ನೀಡಲಾಗಿತ್ತು. ಅಲ್ಲದೆ ಕಾಲುವೆ, ಕೆರೆ, ನದಿಗಳಲ್ಲಿ ಮೂರ್ತಿಗಳನ್ನು ವಿಸರ್ಜಿಸುವು ದರಿಂದ ಜಲ ಮಾಲಿನ್ಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ 5 ಅಡಿ ಆಳದ ಹೊಂಡ ನಿರ್ಮಿಸಿ ಇದಕ್ಕೆ ಶುದ್ಧ ನೀರನ್ನು ತುಂಬಿಸಲಾಗಿದೆ. ಇದರ ಅಡಿಯಲ್ಲಿ ಎಂ. ಸ್ಯಾಂಡ್ ಹಾಕಲಾಗಿದ್ದು, ಪಾಲಿಥಿನ್ ಟಾರ್ಪಾಲ್‌ನಿಂದ ಹೊಂಡ ನಿರ್ಮಾಣ ವಾಗಿದೆ. ಸುರಕ್ಷತೆಗಾಗಿ ಇದರ ಸುತ್ತಲೂ ಮರದ ಬೇಲಿ ಹಾಕಲಾಗಿದೆ.

ಹೊಂಡದಲ್ಲಿ ಮೂರ್ತಿಗಳನ್ನು ವಿಸರ್ಜಿಸಲು ಮೆಟ್ಟಿಲು ವ್ಯವಸ್ಥೆ ಇದೆ. ಎಲ್ಲ ಮುಗಿದ ಮೇಲೆ ಈ ನೀರನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಗಿಡ ಮರಗಳಿಗೆ ಬಳಸಿಕೊಳ್ಳಲಾಗುತ್ತದೆ. ವಿಸರ್ಜನೆ ವೇಳೆ ಪ್ಲಾಸ್ಟಿಕ್, ಇತರ ತ್ಯಾಜ್ಯಗಳನ್ನು ಪ್ರತ್ಯೇಕವಾಗಿಸಬೇಕು. ಜತೆಗೆ ಮಣ್ಣಿನ ಮೂರ್ತಿಯನ್ನು ಮಾತ್ರ ನೀರಿಗೆ ಹಾಕಬೇಕು. ಅಲ್ಲದೆ ಮೆಟ್ಟಿಲುಗಳ ಮೇಲೆ ನಿಂತು ಗಣೇಶ ಮೂರ್ತಿಯನ್ನು ವಿಸರ್ಜಿಸಬಹುದಾಗಿದೆ.

ಶನಿವಾರ ಗಣೇಶ ಚತುರ್ಥಿ ಮುಗಿದ ಮೇಲೆ ಅನೇಕರು ತಮ್ಮ ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ಮೂರ್ತಿಗಳನ್ನು ಹೊಂಡದಲ್ಲಿ ವಿಸರ್ಜನೆ ಮಾಡುವ ಮೂಲಕ ಭಕ್ತಿ ಮೆರೆದರು.

ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಆದೇಶದ ಮೇರೆಗೆ ಪಟ್ಟಣ ಪಂಚಾಯಿತಿ ಕಚೇರಿ ಬಳಿ ಗಣೇಶನ ಮೂರ್ತಿಗಳನ್ನು ವಿಸರ್ಜಿಸಲು ತಾತ್ಕಾಲಿಕವಾಗಿ ಹೊಂಡ ನಿರ್ಮಾಣ ಮಾಡಲಾಗಿದೆ. ಸಾರ್ವಜನಿಕರು ಕಡ್ಡಾಯವಾಗಿ ಇಲಾಖೆಯೊಂದಿಗೆ ಈ ಕಾರ್ಯಕ್ಕೆ ಕೈ ಜೋಡಿಸಬೇಕು. ಇದನ್ನು ಮಲಿನಗೊಳಿಸದೆ ಮಣ್ಣಿನ ಮೂರ್ತಿಗಳನ್ನು ಇದರಲ್ಲಿ ಹಾಕಬೇಕು. ಹೂವು, ಹಣ್ಣು, ಕಾಯಿಗಳನ್ನು ಇದರಲ್ಲಿ ಹಾಕಬಾರದು. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು.
ಮಹೇಶ್‌ಕುಮಾರ್ ಪಪಂ ಮುಖ್ಯಾಧಿಕಾರಿ