ಅಕ್ಕಿಆಲೂರು: ಬಕ್ರೀದ್ ಹಬ್ಬದ ಪ್ರಯುಕ್ತ ಗೋ ಹತ್ಯೆ ಅಧಿಕವಾಗಿದ್ದು, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹಿಂದು ಜಾಗರಣಾ ವೇದಿಕೆಯ ಮನವಿಯ ಹಿನ್ನಲೆಯಲ್ಲಿ ಪಟ್ಟಣದಲ್ಲಿ ಶುಕ್ರವಾರ ತಾತ್ಕಾಲಿಕ ಚೆಕ್‌ಪೋಸ್ಟ್ ನಿರ್ಮಿಸಲಾಗಿದೆ.
ಪಟ್ಟಣದ ಸಿಂಧೂರ ಸಿದ್ದಪ್ಪ ವೃತ್ತದಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲಾಗಿದ್ದು, ಅಕ್ಕಿಆಲೂರ ಮಾರ್ಗವಾಗಿ ಹಾವೇರಿ, ಹಾನಗಲ್ಲ, ಶಿರಸಿಗೆ ಸಂಚರಿಸುವ ಸರಕು ಸಾಗಣೆ ವಾಹನಗಳ ತಪಾಸಣೆ ನಡೆಸಲಾಗುತ್ತದೆ. ಪೊಲೀಸ್ ಇಲಾಖೆ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ಅನುಮಾಸ್ಪದ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸಿ, ವಾಹನ ಸಂಖ್ಯೆ ನೋಂದಾಯಿಸಿಕೊಳ್ಳುತ್ತಿದ್ದಾರೆ.
ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲಾಗಿದೆ. ಅಕ್ಕಿಆಲೂರ ಮಾತ್ರವಲ್ಲ, ಸಮ್ಮಸಗಿ, ಗೊಂದಿ, ಕೊಪ್ಪರಸಿಕೊಪ್ಪ ಸೇರಿ ಹಾನಗಲ್ಲ ಮತ್ತು ಬೊಮ್ಮನಹಳ್ಳಿ ಹೋಬಳಿಗಳ ವ್ಯಾಪ್ತಿಯಲ್ಲಿ ತಾತ್ಕಾಲಿಕ ಚೆಕ್‌ಪೋಸ್ಟ್ ನಿರ್ಮಿಸಿದ್ದೇವೆ ಎಂದು ಹಾನಗಲ್ಲ ಪಿಎಸ್‌ಐ ಸಂಪತ್ತಕುಮಾರ ಆನಿಕಿವಿ ವಿಜಯವಾಣಿಗೆ ತಿಳಿಸಿದ್ದಾರೆ.
ಹಿಂದು ಜಾಗರಣಾ ವೇದಿಕೆಯಿಂದ ಕೊಟ್ಟ ಮನವಿಗೆ ಪೊಲೀಸ್ ಇಲಾಖೆ ಕೂಡಲೆ ಸ್ಪಂದಿಸಿ, ಅಕ್ರಮ ಗೋ ಸಾಗಣೆಯಾಗದಂತೆ ಚೆಕ್ ಪೊಸ್ಟ್ ನಿರ್ಮಿಸಿದೆ. ಕಾನೂನುಬಾಹಿತ ಕೃತ್ಯ ಮಾಡಿದರೆ ಪೊಲೀಸರು ಕಠಿಣ ಕ್ರಮಕೈಗೊಳ್ಳುವ ವಿಶ್ವಾಸ ಬಂದಿದೆ ಎಂದು ಹಿಂಜಾವೆ ಜಿಲ್ಲಾ ಸಂಯೋಜಕ ಹರೀಶ ಹಾನಗಲ್ಲ ತಿಳಿಸಿದ್ದಾರೆ.