ವಿಜಯವಾಣಿ ವಿಶೇಷ ಹಾವೇರಿ
ನಟ ಪುನೀತ್ ರಾಜಕುಮಾರ ಸವಿನೆನಪಿಗಾಗಿ ಅಭಿಮಾನಿಗಳು ಅನ್ನದಾನ, ರಕ್ತದಾನ ಸೇರಿ ನಾನಾ ಬಗೆಯ ಕಾರ್ಯಕ್ರಮ ಮಾಡುತ್ತಿದ್ದಾರೆ. ಆದರೆ, ಇಲ್ಲೊಬ್ಬ ಅಭಿಮಾನಿ ಪುನೀತ್ ಅವರಿಗೆ ದೇವಸ್ಥಾನವನ್ನೇ ಕಟ್ಟಿಸಿದ್ದಾರೆ!
ತಾಲೂಕಿನ ಯಲಗಚ್ಚ ಗ್ರಾಮದ ಪ್ರಕಾಶ ಮರಬದ ತಮ್ಮ ನೆಚ್ಚಿನ ನಟನ ಸ್ಮರಣೆಗಾಗಿ ದೇವಸ್ಥಾನ ಕಟ್ಟಿಸಿದ ಅಭಿಮಾನಿ. ಡಾನ್ಸ್ ಮಾಸ್ಟರ್ ಆಗಿರುವ ಪ್ರಕಾಶ ಅವರಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎಂದರೆ ಅಚ್ಚುಮೆಚ್ಚು. ಪುನೀತ್ ಅವರೊಂದಿಗೆ ನಟಿಸಬೇಕು ಎಂಬುದು ಪ್ರಕಾಶ ಕಂಡ ಕನಸಾಗಿತ್ತು. ಹಲವು ಬಾರಿ ಪುನೀತ್ ಭೇಟಿಗೆ ತೆರಳಿದ್ದರೂ ಸಾಧ್ಯವಾಗಿರಲಿಲ್ಲ. ದೂರದಿಂದ ಅಪ್ಪುವನ್ನು ನೋಡಿದ ತೃಪ್ತಿಯಿಂದ ಪ್ರಕಾಶ ಮನೆಗೆ ಮರಳಿದ್ದರು.
ಪ್ರಕಾಶ ಅವರ ಇಡೀ ಕುಟುಂಬ ಪುನೀತ್ ಅಭಿಮಾನಿಗಳಾಗಿದ್ದು, ತಮ್ಮ ಮನೆಯ ಆವರಣದಲ್ಲಿ 2 ಗುಂಟೆ ಜಾಗದಲ್ಲಿ ಸುಮಾರು 8 ಲಕ್ಷ ರೂ. ಖರ್ಚು ಮಾಡಿ ದೇವಸ್ಥಾನ ಕಟ್ಟಿಸಿದ್ದಾರೆ. ಅಗಡಿಯ ಕಲಾವಿದರೊಬ್ಬರು ಪುನೀತ್ ರಾಜಕುಮಾರ ಅವರ ಪುತ್ಥಳಿ ನಿರ್ವಿುಸುತ್ತಿದ್ದು, ಅಂತಿಮ ಸ್ಪರ್ಶ ನೀಡುವ ಕಾರ್ಯ ಪ್ರಗತಿಯಲ್ಲಿದೆ.
ಸಾಮಾಜಿಕ ಕಾರ್ಯಕರ್ತ ಸಂಜಯಗಾಂಧಿ ಸಂಜೀವಣ್ಣನವರ ಪ್ರಕಾಶ ಮರಬದಗೆ ಸಾಥ್ ನೀಡುತ್ತಿದ್ದಾರೆ. ಪ್ರಕಾಶ ಅವರು ಸರ್ಕಾರಿ ಶಾಲೆ ಮಕ್ಕಳು ಹಾಗೂ ಅಂಗವಿಕಲರಿಗೆ ಉಚಿತವಾಗಿ ನೃತ್ಯ ತರಬೇತಿ ನೀಡುತ್ತಿದ್ದಾರೆ. ಅಕ್ಕಪಕ್ಕದ ತಂಗುದಾಣಗಳಿಗೆ ತಮ್ಮದೇ ಖರ್ಚಿನಲ್ಲಿ ಸುಣ್ಣಬಣ್ಣ ಬಳಿದು ಯುವಕರಿಗೆ ಮಾದರಿಯಾಗಿದ್ದಾರೆ. ಪುನೀತ್ ರಾಜಕುಮಾರ ಅವರ ಹೆಸರಿನಲ್ಲಿ ರಕ್ತದಾನ ಸೇರಿ ಇತರ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಪುನೀತ್ ಪುನೀತ್ ದೇವಸ್ಥಾನ ಹಾಗೂ ಪುತ್ಥಳಿ ಉದ್ಘಾಟನೆಯನ್ನು ಅವರ ಪತ್ನಿ ಅಶ್ವಿನಿ ಅವರಿಂದ ಮಾಡಿಸಬೇಕು ಎಂದು ಈಗಾಗಲೇ ಪ್ರಕಾಶ ಮರಬದ ನಾಲ್ಕು ಬಾರಿ ಅವರನ್ನು ಭೇಟಿಯಾಗಿದ್ದಾರೆ. ಸೆ. 26ರಂದು ದೇವಸ್ಥಾನ ಉದ್ಘಾಟನೆಗೆ ಬರಲು ಅಶ್ವಿನಿ ಅವರು ಒಪ್ಪಿಕೊಂಡಿದ್ದಾರಂತೆ.
ದೇವಸ್ಥಾನ ಹಾಗೂ ಪುತ್ಥಳಿ ಉದ್ಘಾಟನೆಗೆ ಬರುವಂತೆ ಅಶ್ವಿನಿ ಪುನೀತ್ ರಾಜಕುಮಾರ ಅವರನ್ನು ಪ್ರಕಾಶ ಮರಬದ ನಾಲ್ಕು ಬಾರಿ ಭೇಟಿಯಾಗಿ ವಿನಂತಿಸಿದ್ದಾರಂತೆ. ಸೆ. 26ರಂದು ದೇವಸ್ಥಾನ ಉದ್ಘಾಟನೆಗೆ ಬರಲು ಅಶ್ವಿನಿ ಅವರು ಒಪ್ಪಿಕೊಂಡಿದ್ದಾರಂತೆ.
ಡಾ. ಪುನೀತ್ ರಾಜಕುಮಾರ ಅವರೊಂದಿಗೆ ಒಂದು ಬಾರಿಯಾದರೂ ನಟಿಸುವುದು ನನ್ನ ಜೀವನದ ಕನಸಾಗಿತ್ತು. ಆದರೆ, ವಿಧಿಯಾಟ ಅವರನ್ನು ದೂರ ಮಾಡಿದೆ. ಪುನೀತ್ ಅವರ ಹೆಸರು ಅಜರಾಮರ ಆಗಿರಬೇಕು ಎಂದು ನಮ್ಮ ಸ್ವಂತ ಜಾಗದಲ್ಲಿ ದೇವಸ್ಥಾನ ನಿರ್ವಿುಸಿದ್ದೇನೆ. ಇಲ್ಲಿ ನಿತ್ಯವೂ ಪುನೀತ್ ಅವರಿಗೆ ಪೂಜೆ ನೆರವೇರಲಿದೆ. | ಪ್ರಕಾಶ ಮರಬದ, ಪುನೀತ್ ಅಭಿಮಾನಿ