ಸುಂಟಿಕೊಪ್ಪ: ವಾಹನ ಚಾಲಕರ ಸಂಘದ ಸಾರ್ವಜನಿಕ ವೇದಿಕೆ ಮುಂಭಾಗದಲ್ಲಿ ಸಭೆ ಸಮಾರಂಭಗಳು ನಡೆಯುವ ಸಂದರ್ಭ ಸಾರ್ವಜನಿಕರನ್ನು ಬಿಸಿಲು, ಮಳೆ, ಗಾಳಿಯಿಂದ ರಕ್ಷಿಸುವ ಸಲುವಾಗಿ 50 ಲಕ್ಷ ರೂ.ವೆಚ್ಚದಲ್ಲಿ ಛಾವಣಿ ನಿರ್ಮಾಣ ಮಾಡಲಾಗುವುದು ಎಂದು ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ಹೇಳಿದರು.
ಸುಂಟಿಕೊಪ್ಪ ವಾಹನ ಚಾಲಕರ ಸಂಘದ ವತಿಯಿಂದ ಬುಧವಾರ 55ನೇ ವರ್ಷದ ಅದ್ದೂರಿ ಆಯುಧಪೂಜಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸುಂಟಿಕೊಪ್ಪ ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಧಾರ್ಮಿಕ ಆಚರಣೆಗಳು ಕೇವಲ 1 -2 ದಿನಗಳ ಆಚರಣೆಗೆ ಸಿಮೀತವಾಗದೆ. 365 ದಿನಗಳ ಕಾಲ ಆಚರಣೆ ಮಾಡಬೇಕಾಗಿದೆ ಎಂದು ಕರೆ ನೀಡಿದರು.
ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಆಯುಧಪೂಜೆ ಮತ್ತು ವಿಜಯ ದಶಮಿ ಜಾತ್ಯತೀತ ಮತ್ತು ಧರ್ಮತ್ತೀತ ನೆಲೆಗಟ್ಟಿನಲ್ಲಿ ಆಚರಿಸ್ಪಡುತ್ತಿದ್ದು, ಸುಂಟಿಕೊಪ್ಪದಲ್ಲಿ ಆಯುಧ ಪೂಜಾ ಸಮಾರಂಭ ಇಡೀ ರಾಜ್ಯದಲ್ಲಿ ಗಮನ ಸೆಳೆದ ಕಾರ್ಯಕ್ರಮವಾಗಿದ್ದು ಇದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಇದೆ. ವಾಹನ ಚಾಲಕರ ಸಂಘದ ಸ್ಥಾಪಕ ಅಧ್ಯಕ್ಷ ಜೆರ್ಮಿ ಡಿಸೋಜ ಅವರು ಸಂಘದ ಉಸ್ತುವಾರಿಯಲ್ಲಿ ಆಂಬುಲೆನ್ಸ್ ವಾಹನವನ್ನು ನೀಡಿದ್ದಾರೆ.
ಸಮಾರಂಭ ಉದ್ಘಾಟಿಸಿದ ಜಿಲ್ಲಾಡಳಿತದ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್ ಮಾತನಾಡಿ, ವಾಹನ ಚಾಲಕರ ಸಂಘದ ವೇದಿಕೆಯು ಸರ್ವಧರ್ಮ ಸಮ್ಮಿಲನಕ್ಕೆ ವೇದಿಕೆಯಾಗಿದ್ದು ಸುಂಟಿಕೊಪ್ಪದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಿಗೆ ಈ ವೇದಿಕೆ ಚಾಲನೆ ನೀಡಿದ ಹಿರಿಮೆಯನ್ನು ಹೊಂದಿದೆ ಎಂದು ಬಣ್ಣಿಸಿದರು.
ಜಿ.ಪಂ.ಮಾಜಿ ಸದಸ್ಯ ಪಿ.ಎಂ.ಲತೀಫ್ ಪ್ರಾಸ್ತಾವಿಕವಾಗಿ ಸಂಘವು ನಡೆದು ಹಾದಿ ಮುಂದಿನ ಸಂಘದ ಕಾರ್ಯಕ್ರಮಗಳಲ್ಲಿ ಹೊಸತನವನ್ನು ಅಳವಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಹಾಸ್ಯನಟ ಟೆನಿಸ್‌ಕೃಷ್ಣ ಮಾತನಾಡಿ, ಸುಂಟಿಕೊಪ್ಪದ ಆಯುಧಪೂಜಾ ಸಮಾರಂಭಕ್ಕೆ 55 ವರ್ಷಗಳ ಇತಿಹಾಸ ಇರುವ ಬಗ್ಗೆ ವಾಹನ ಚಾಲಕ ಸಂಘದ ಪ್ರಯತ್ನಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ನಿವೃತ್ತ ಪ್ರಾಂಶುಪಾಲ ಡಾ.ಡಿ.ದೇವರಾಜ್ ಅವರನ್ನು ಅತಿಥಿ ಗಣ್ಯರು ಸನ್ಮಾನಿಸಿದರು.
ಕುಶಾಲನಗರ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಪಿ.ಚಂದ್ರಕಲಾ, ಬಿ.ಬಿ.ಭಾರತೀಶ್, ಗ್ರಾ.ಪಂ.ಉಪಾಧ್ಯಕ್ಷೆ ಶಿವಮ್ಮಮಹೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್, ಸದಸ್ಯರಾದ ರಫೀಕ್‌ಖಾನ್,ಪ್ರಸಾದ್ ಕುಟ್ಟಪ್ಪ, ಆಲಿಕುಟ್ಟಿ, ಸೋಮನಾಥ್ ಶಾಂತಿ, ವಸಂತಿ, ಮಂಜುಳಾ (ರಾಸಥಿ), ಮಂಗಳಾ, ಗ್ರಾ.ಪಂ.ಮಾಜಿ ಅಧ್ಯಕ್ಷ ಕ್ಲಾಡಿಯಸ್‌ಲೋಬೋ, ಎ.ಬಿ.ಅಜೀಜ್, ಆಟೋ ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಎ.ಎಂ.ಶರೀಫ್, ಉದ್ಯಮಿ ವಿಲಿಯಂ, ರತ್ನಕುಮಾರ್, ಕಾರ್ಮಿಕರು ಮತ್ತು ಚಾಲಕರ ಸಂಘದ ಅಧ್ಯಕ್ಷ ಜಿ.ಕುಮಾರ್, ಯಂಕನ ಶ್ರೀರಾಮ್, ವರ್ಕ್‌ಶಾಪ್ ಮಾಲೀಕರ ಸಂಘದ ಅಧ್ಯಕ್ಷ ರಮೇಶ್, ತಲೆಹೊರೆ ಕಾರ್ಮಿಕ ಸಂಘದ ಅಧ್ಯಕ್ಷ ಆರ್.ಕೆ.ಹರೀಶ್, ವಾಹನ ಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ, ಕಾರ್ಯದರ್ಶಿ ಮುನೀರ್ ಇತರರು ಇದ್ದರು.
ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಿದ್ದ ಸಾರ್ವಜನಿಕ ಭವ್ಯ ವೇದಿಕೆಯಲ್ಲಿ ಬೆಂಗಳೂರಿನ ಶೈನಿಂಗ್ ಸ್ಟಾರ್ ಮೆಲೋಡಿ ಗಾಯ್ಸ ಆರ್ಕೆಸ್ಟ್ರಾ ತಂಡದಿಂದ ಸಂಗೀತ ರಸಮಂಜರಿ ಹಾಗೂ ಮಿಮಿಕ್ರಿ ಗೋಪಿ ಮತ್ತು ವಿಕ್ಟರಿ ವಾಸು ಅವರಿಂದ ಮಿಮಿಕ್ರಿ ಮತ್ತು ಹಾಸ್ಯಲ್ಯಾಸ ಕಾರ್ಯಕ್ರಮ ನಡೆಯಿತು.