ಜಿಲ್ಲೆ

ದುಶ್ಚಟಮುಕ್ತ ಸಮಾಜದ ನಿರ್ಮಾಣ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ ಗುರಿ

ಮೈಸೂರು: ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಮತ್ತು ದುಶ್ಚಟಮುಕ್ತ ಸಮಾಜದ ನಿರ್ಮಾಣ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನಿಂದ ನೂತನ ವರ್ಷದ ಸಂಕಲ್ಪವಾಗಿದೆ ಎಂದು ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನ ಸಂಕಲ್ಪಸೌಧ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಹೊಸ ವರ್ಷದ ಸಂಭ್ರಮಾಚರಣೆ ಸಭೆ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿರುವ ಬಡವರ, ಮಹಿಳೆಯರ, ರೈತರ ಆರ್ಥಿಕ ಸಾಮಾಜಿಕ, ಶೈಕ್ಷಣಿಕ ಹಾಗೂ ಸಮುದಾಯಗಳ ಅಭಿವೃದ್ಧಿ ಮತ್ತು ಸಬಲೀಕರಣಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಪ್ರಾರಂಭಿಸಲಾಯಿತು. ಗ್ರಾಮೀಣ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಹೊಸ ಉತ್ಸಾಹದೊಂದಿಗೆ ಸೇವೆ ಮಾಡಿ ಎಂದರು.

ಯೋಜನೆಯ ಜಿಲ್ಲಾ ನಿರ್ದೇಶಕ ವಿ.ವಿಜಯ್ಕುಮಾರ್ ನಾಗನಾಳ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸೇವೆ ಮಾಡಿದ ಕಾರ್ಯಕರ್ತರು ಯೋಜನೆಯ ಎಲ್ಲ ಕಾರ್ಯಕ್ರಮಗಳನ್ನು ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬಗಳಿಗೆ ತಲುಪಿಸುವುದು ಪ್ರತಿಯೊಬ್ಬ ಕಾರ್ಯಕರ್ತನ ಶ್ರದ್ಧೆ ಮತ್ತು ಇಚ್ಛಾಶಕ್ತಿ ಆಗಿರಬೇಕು. ಕುಟುಂಬದ ಸರ್ವಾಂಗೀಣ ಅಭಿವೃದ್ಧಿಯಿಂದ ರೈತರ ಕಲ್ಯಾಣ ಆಗಬೇಕು ಎಂದರು.

ಧರ್ಮಸ್ಥಳ ಯೋಜನೆ ಕೃಷಿಕರಿಗೆ, ಮಹಿಳೆಯರಿಗೆ, ಯುವಕ-ಯುವತಿಯರಿಗೆ ದುಶ್ಚಟಗಳಿಂದ ಬಳಲುತ್ತಿರುವ ಜನರಿಗೆ, ಅನಾರೋಗ್ಯ ಪೀಡಿತರಿಗೆ, ದುಡಿಯುವ ಸಾಮರ್ಥ್ಯ ಇಲ್ಲದವರಿಗೆ ಮತ್ತು ವಿದ್ಯಾರ್ಥಿ ವರ್ಗದವರಿಗೆ ಸೌಲಭ್ಯ ನೀಡುವ ಆಗರವಾಗಿದೆ. ಹೊಸವರ್ಷವು ನಿಮ್ಮ ಎಲ್ಲ ಪ್ರಯತ್ನಗಳಲ್ಲಿ ಯಶಸ್ಸು ತರಲಿ ಎಂದು ಶುಭ ಹಾರೈಸಿದರು.

ಯೋಜನೆಯ ನಿರ್ದೇಶಕ ಚಿದಾನಂದ, ಯೋಜನಾಧಿಕಾರಿ ದಿನೇಶ್, ಮಾಧವ ಬಿ.ದಿನೇಶ್, ಪುಷ್ಪರಾಜ್, ಸಚಿನ್, ಮಂಜುನಾಥ್, ಚೇತನ್, ಮೂಕಾಂಬಿಕೆ, ಶಶಿರೇಖಾ, ಸೇರಿದಂತೆ ಪ್ರಬಂಧಕರು, ಸಿಬ್ಬಂದಿ ಇದ್ದರು.