ಬಳ್ಳಾರಿ ನಗರದ ಕಪಗಲ್ ರಸ್ತೆಯ ಬದ್ರಿನಾರಾಯಣ ದೇವಸ್ಥಾನದ ಬಳಿ ಚಂದ್ರಯಾನ-3 ಯಶಸ್ವಿ ಹಿನ್ನೆಲೆಯಲ್ಲಿ ಯಂಗ್‌ಸ್ಟಾರ್ ವಿನಾಯಕ ಮಿತ್ರ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ಆಕರ್ಷಿಸುತ್ತಿರುವುದು.  
ಜಿಲ್ಲೆ

ಗಣೇಶ ಮೂರ್ತಿ ವಿಸರ್ಜನೆಗೆ ಹೊಂಡ ನಿರ್ಮಾಣ

ಬಳ್ಳಾರಿ : ಜಿಲ್ಲಾದ್ಯಂತ ಗಣೇಶ ಚತುರ್ಥಿ ಪ್ರಯುಕ್ತ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಹೊಂಡಗಳ ನಿರ್ಮಿಸಲಾಗಿದೆ. ಬಳ್ಳಾರಿ ನಗರದ ರಾಜಕಾಲುವೆ, ಬಾವಿಗಳಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸದೇ ಚಿಕ್ಕ ಚಿಕ್ಕ ಗಣೇಶ ಮೂರ್ತಿಗಳನ್ನು ತಮ್ಮ ಮನೆಯಲ್ಲಿಯೇ ಬಕೇಟುಗಳಲ್ಲಿ ವಿಸರ್ಜಿಸಬೇಕು ಎಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.

ಇನ್ನು ದೊಡ್ಡಮಟ್ಟದ ಗಣೇಶ ಮೂರ್ತಿಗಳ ವಿಸರ್ಜನೆಗೆ ಬಳ್ಳಾರಿ ನಗರದ 10 ಕಡೆಗಳಲ್ಲಿ ಹೊಂಡಗಳ ನಿರ್ಮಿಸಲಾಗಿದೆ. ತಾಳೂರು ರಸ್ತೆಯ ಹೊಸಕೋರ್ಟ್ ಹಿಂಭಾಗದಲ್ಲಿರುವ ಕಾಲುವೆಯ ಹೊಸ ಬ್ರಿಡ್ಜ್ ಹತ್ತಿರ, ಕಪಗಲ್ ರಸ್ತೆಯ ಬ್ರಹ್ಮಯ್ಯ ದೇವಸ್ಥಾನದ ಹತ್ತಿರದ ಕಾಲುವೆ ಪಕ್ಕದಲ್ಲಿ, ಸಿರಗುಪ್ಪ ರಸ್ತೆಯ ಕಾಲುವೆ ಪಕ್ಕದಲ್ಲಿ ರಾಮನಗುಡಿ ಹತ್ತಿರ, ಗುಗರಟ್ಟಿ ಹೊನ್ನಳ್ಳಿ ರಸ್ತೆಯ ಕಾಲುವೆ ಪಕ್ಕದಲ್ಲಿ ಎಡಭಾಗದಲ್ಲಿ, ಗುಗರಟ್ಟಿ ಬೆಂಗಳೂರು ರಸ್ತೆಯ ಕಾಲುವೆ ಪಕ್ಕದಲ್ಲಿ ಎಡಭಾಗ, ಮುಂಡ್ರಗಿ ಕಾಲುವೆ ಹತ್ತಿರ ಬಲಭಾಗ, ಅಲ್ಲೀಪುರದ ಕಾಲುವೆ ಹತ್ತಿರ ತಾತನ ಮಠದ ಹತ್ತಿರ, ಬೆಳಗಲ್ ಕ್ರಾಸ್ ಡಿಸಿ ನಗರ ಕಾಲುವೆ ಪಕ್ಕದಲ್ಲಿ, ಬಂಡಿಹಟ್ಟಿ ಕಾಲುವೆ ಪಕ್ಕದಲ್ಲಿ, ದೇವಿ ನಗರದ ಬಸವನ ಕುಂಟೆಯಲ್ಲಿ ಹೊಂಡಗಳನ್ನು ನಿರ್ಮಿಸಲಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

1289 ಗಣೇಶ ಮೂರ್ತಿ ಪ್ರತಿಷ್ಠಾಪನೆ
ಜಿಲ್ಲೆಯಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಸುಮಾರು 1289 ಕಡೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಅದರಲ್ಲಿ 52 ಅತಿಸೂಕ್ಷ್ಮ, 399 ಸೂಕ್ಷ್ಮ ಮತ್ತು 838 ಕಡೆಗಳಲ್ಲಿ ಸಾಧಾರಣವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಮೂರನೇ ದಿನ, ಐದನೇ ದಿನ, 7ನೇ ದಿನ ಹಾಗೂ 9 ಮತ್ತು 11ನೇ ದಿನ ವಿಸರ್ಜನೆಗೆ ಕಾಲಾವಕಾಶ ನೀಡಲಾಗಿದೆ.

ವಿವಿಧೆಡೆ ಪೊಲೀಸ್ ಬಂದೋಬಸ್ತ್
ಬಳ್ಳಾರಿ ನಗರದಲ್ಲಿ ಗಣೇಶ ಚತುರ್ಥಿ ಅಂಗವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ವಿಸರ್ಜನೆ ವೇಳೆ ಯಾವುದೇ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಪೊಲೀಸ್ ಇಲಾಖೆ ವಿವಿಧೆಡೆ ಬಂದೋಬಸ್ತ್ ಏರ್ಪಡಿಸಲಾಗಿದೆ. 200 ಪೊಲೀಸ್ ಸಿಬ್ಬಂದಿ, 100 ಗೃಹ ರಕ್ಷಕ ದಳ ಸಿಬ್ಬಂದಿ, ಎರಡು ಐಆರ್‌ಬಿ ಮತ್ತು ಡಿಎಆರ್ ತುಕಡಿಗಳು, ಡಿವೈಎಸ್‌ಪಿ, ಪಿಎಸ್‌ಐಗಳನ್ನು ನಿಯೋಜಿಸಲಾಗಿದ್ದು, ಗಣೇಶ ಪೆಂಡಾಲ್‌ಗಳ ಬಳಿ ಯಾವುದೇ ಅಹಿತಕರ ಘಟನೆ ನಡೆಯದಂತೆ, ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲೆಡೆ ಪೊಲೀಸರ ಕಣ್ಗಾವಲು ಇರಿಸಲಾಗಿದೆ.