ಜಿಲ್ಲೆ

10 ಕೋಟಿ ರೂ. ವೆಚ್ಚದಲ್ಲಿ ಶೀತಲ ಗೃಹ ನಿರ್ಮಾಣ

 ಶಾಸಕ ಟಿ.ಬಿ.ಜಯಚಂದ್ರ ಮಾಹಿತಿ | ಕಾಮಗಾರಿಗೆ ಭೂಮಿಪೂಜೆ

 ಶಿರಾ : ರೈತರು ಬೆಳೆದ ತರಕಾರಿ ಮತ್ತು ಹಣ್ಣುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಶಿರಾ ತಾಲೂಕಿನಲ್ಲಿ ಶೀತಲ ಗೃಹ ನಿಮಾರ್ಣ ಮಾಡಲು ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಶಾಸಕ ಟಿ.ಬಿ.ಜಯಚಂದ್ರ ತಿಳಿಸಿದರು.

ಶಿರಾ ತಾಲೂಕಿನ ಮಾನಂಗಿ ಉಪ ಮಾರುಕಟ್ಟೆಯ ಆವರಣದಲ್ಲಿ ಬುಧವಾರ 18 ಎಕರೆ ಜಾಗದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿಮಾರ್ಣವಾಗುತ್ತಿರುವ 2850 ಮೆಟ್ರಿಕ್​ ಟೆನ್​ ಸಾಮರ್ಥ್ಯದ ಶೀತಲ ಗೃಹಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಮೂರು ವರ್ಷಗಳ ಹಿಂದೆ ಶಿರಾ ತಾಲೂಕಿನ ರೈತರು ಬೃಹದಾಕಾರವಾಗಿ ಬೆಳೆದು ನಿಂತಿರುವ ಹುಣಸೆ ಮರಗಳನ್ನು ಕಡಿದು ಹಾಕುತ್ತಿದ್ದರು. ಅದಕ್ಕೆ ಕಾರಣ ಹುಣಸೆ ಹಣ್ಣಿನ ಸಂರಕ್ಷಣೆ ಕೊರತೆ ಹಾಗೂ ಇಳುವರಿ ಬಂದಾಗ ಬೆಲೆ ಸಿಗದೆ ಇರುವುದು. ಇದನ್ನು ಅರಿತು ರೈತರ ಹಿತ ಕಾಪಾಡಲು ಹಾಗೂ ರೈತರು ಬೆಳೆದ ತರಕಾರಿ ಮತ್ತು ಹಣ್ಣುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಶಿರಾ ತಾಲೂಕಿನಲ್ಲಿ ಶೀತಲ ಗೃಹ ನಿಮಾರ್ಣ ಮಾಡುವ ಯೋಚನೆ ಕೈಗೆತ್ತಿಕೊಂಡಿದ್ದು, ಈ ಕಾಮಗಾರಿಯನ್ನು ಒಂದು ವರ್ಷದೊಳಗೆ ಮುಗಿಸಿ, ರೈತರಿಗೆ ಅನುಕೂಲ ಮಾಡಬೇಕೆಂದು ತಿಳಿಸಿದರು.

ತಾಲೂಕಿಗೆ ಹೇಮಾವತಿ ನೀರು ಹರಿದು ಬರುವ ಮುನ್ನ ಕೇವಲ ನಾಲ್ಕು ಸಾವಿರ ಹೇಕ್ಟರ್​ ತೋಟಗಾರಿಕೆ ಬೆಳೆ ಮಾತ್ರ ಇತ್ತು. ಆದರೆ ಇಂದು 42,000 ಹೇಕ್ಟರ್​ ತೋಟಗಾರಿಕೆ ಬೆಳೆ ಇದೆ. ಇದಕ್ಕೆ ಮೂಲ ಕಾರಣ ನಮ್ಮಲ್ಲಿನ ಚೆಕ್​ ಡ್ಯಾಂಗಳು ತುಂಬಿರುವುದು ಹಾಗೂ ಅಂತರ್ಜಲ ಮಟ್ಟ ಹೆಚ್ಚಾಗಿರುವುದು. ಪ್ರಸಕ್ತ ವರ್ಷದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಚೆಕ್​ ಡ್ಯಾಂಗಳನ್ನು ತಾಲೂಕಿನ ವಿವಿಧೆಡೆ ನಿಮಾರ್ಣ ಮಾಡುತ್ತೇನೆ ಎಂದರು.

ಕೃಷಿ ಮಾರುಕಟ್ಟೆ ಮಾಜಿ ಸಮಿತಿಯ ಅಧ್ಯಕ್ಷ ಶಶಿಧರ್​ಗೌಡ ಮಾತನಾಡಿ, ಹಿಂದೆ ರೈತರು ತಾವು ಬೆಳೆದ ಹುಣಸೆ ಹಣ್ಣು ಹಾಗೂ ತೋಟಗಾರಿಕೆ ಉತ್ಪನ್ನಗಳನ್ನು ಸಂರಕ್ಷಿಸಲು ಸಾಧ್ಯವಾಗದೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಶೀತಲ ಗೃಹವನ್ನು ನಿಮಾರ್ಣ ಮಾಡಿಯೇ ತೀರುತ್ತೇನೆ ಎಂದು ರೈತರಿಗೆ ಭರವಸೆ ನೀಡಿದ್ದೆ, ಶಾಸಕ ಟಿ.ಬಿ.ಜಯಚಂದ್ರ ಅವರ ಆಶೀರ್ವಾದದಿಂದ ಕನಸು ನನಸಾಗಿದೆ ಎಂದು ತಿಳಿಸಿದರು.

ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪಿ.ಆರ್​.ಮಂಜುನಾಥ್​, ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್​, ಶಿರಾ ಗ್ರಾಮಾಂತರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಬರಗೂರು ನಟರಾಜ್​, ಎಪಿಎಂಸಿ ಮಾಜಿ ಅಧ್ಯಕ್ಷ ಶಿಶಿಧರ್​ ಗೌಡ, ಕಿಟ್ಟಣ್ಣ, ವಕೀಲ ಗುರುಮೂರ್ತಿ, ನರಸಿಂಹೇಗೌಡ, ಹನಮಂತಪ್ಪ ಮತ್ತಿತರರು ಇದ್ದರು.

18 ಶಿರಾ 02

ಶಿರಾ ತಾಲೂಕಿನ ಮಾನಂಗಿ ಉಪ ಮಾರುಕಟ್ಟೆಯ ಆವರಣದಲ್ಲಿ ನಿರ್ಮಾನವಾಗುತ್ತಿರುವ ಶೀತಲ ಗೃಹಕ್ಕೆ ಶಾಸಕ ಟಿ.ಬಿ.ಜಯಚಂದ್ರ ಭೂಮಿ ಪೂಜೆ ನೆರವೇರಿಸಿದರು. ಕೃಷಿ ಮಾರುಕಟ್ಟೆ ಮಾಜಿ ಸಮಿತಿಯ ಅಧ್ಯಕ್ಷ ಶಶಿಧರ್​ಗೌಡ, ನಗರಸಭೆ ಅಧ್ಯಕ್ಷ ಜೀಷಾನ್​ ಮಹಮ್ಮದ್​, ತಾಪಂ ಇಒ ಹರೀಶ್​, ಕೃಷಿ ಮಾರುಕಟ್ಟೆ ಕಾರ್ಯದರ್ಶಿ ಅನುರಾಧಾ ಮತ್ತಿತರರು ಇದ್ದರು.