ಜಿಲ್ಲೆ

30 ಲಕ್ಷ ರೂ ವೆಚ್ಚದಲ್ಲಿ ರಂಗನತಿಟ್ಟು ಪಕ್ಷಿಧಾಮದಲ್ಲಿ ಚಿಟ್ಟೆ ಪಾರ್ಕ್ ನಿರ್ಮಾಣ: ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಮಾಹಿತಿ

ಮಂಡ್ಯ: ಶ್ರೀರಂಗಪಟ್ಟಣ ತಾಲೂಕು ರಂಗನತಿಟ್ಟು ಪಕ್ಷಿಧಾಮದಲ್ಲಿ ಅಂದಾಜು 30 ಲಕ್ಷ ರೂ ವೆಚ್ಚದಲ್ಲಿ ‘ಚಿಟ್ಟೆ ಪಾರ್ಕ್’ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಅರಣ್ಯ, ಜೀವಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದ್ದಾರೆ.
ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಮಧು ಜಿ.ಮಾದೇಗೌಡ ಪರಿಷತ್‌ನಲ್ಲಿ ಕೇಳಿದ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿರುವ ಸಚಿವ,  ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ನಿರ್ಮಿಸಿರುವ ‘ಚಿಟ್ಟೆ ಪಾರ್ಕ್’ಗೆ ಫೆಬ್ರವರಿ ಮಾಹೆಯಲ್ಲಿ ವಲಯ ಅರಣ್ಯಾಧಿಕಾರಿ, ವನ್ಯಜೀವಿ ವಲಯ ಮೈಸೂರು ಹಾಗೂ ಸಿಬ್ಬಂದಿ ಜತೆ ಕ್ಷೇತ್ರ ತಪಾಸಣೆ ಮಾಡಿ ಅಲ್ಲಿನ ಚಿಟ್ಟೆ ಪಾರ್ಕಿನ ಮಾದರಿಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ಪಡೆದು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
‘ಚಿಟ್ಟೆ ಪಾರ್ಕ್’ನಲ್ಲಿ ಚಿಟ್ಟೆಗಳ ಸಂತಾನೋತ್ಪತ್ತಿಗಾಗಿ 1,500 ಚದರ ಅಡಿ ಹಾಗೂ ಸಾರ್ವಜನಿಕ ವೀಕ್ಷಣೆಗಾಗಿ ಪ್ರದರ್ಶನ ಪ್ರದೇಶ ಸುಮಾರು 5,000 ಚದರ ಅಡಿ ಪ್ರದೇಶ ಮೀಸಲಿಡಲು ಉದ್ದೇಶಿಸಲಾಗಿದೆ. 2025-26ನೇ ಸಾಲಿನ ಕ್ರಿಯಾಯೋಜನೆಯಲ್ಲಿ ಅಳಡಿಸಿಕೊಂಡು 30 ಲಕ್ಷ ರೂ ಅಂದಾಜು ವೆಚ್ಚದಲ್ಲಿ ‘ಚಿಟ್ಟೆ ಪಾರ್ಕ್’ ನಿರ್ಮಿಸಲಾಗುತ್ತಿದೆ.
ರಂಗನತಿಟ್ಟು ಪಕ್ಷಿಧಾಮದಲ್ಲಿ ವಿವಿಧ ಜಾತಿಯ ಆಕರ್ಷಕ, ಅಪರೂಪದ ಚಿಟ್ಟೆಗಳನ್ನು ಗುರುತಿಸಲಾಗಿದೆ ಎಂದು ವಿವರಿಸಿದ್ದಾರೆ.
ಅಲ್ಲದೆ, ಚಿಟ್ಟೆಗಳ ಆಹಾರಕ್ಕಾಗಿ ನಿಂಬೆ ಕಿತ್ತಳೆ, ಈಶ್ವರ ಬಳ್ಳಿ, ಕಾಡು ಹಾಲೆ ಬಳ್ಳಿ, ಕ್ಕೆ ಸೀಮೆ ತಂಗಡಿ, ಕಾಡು ಬಸಳೆ, ಕಲ್ಲುರಕಿ, ಕಾಡು ಕತ್ತರಿ, ಅಶೋಕ ಮರ, ಸಂಪಿಗೆ ವಿವಿಧ ಸಸ್ಯಗಳು/ಗಿಡಗಳನ್ನು ಬೆಳೆಸಲಾಗಿದೆ. ಗಿಡಗಳು ಸಿಗದ ಸಮಯದಲ್ಲಿ ಕೃತಕವಾಗಿ ಹಣ್ಣು ಹಂಪಲುಗಳನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.