ಸೋಮವಾರಪೇಟೆ: ಸೋಮವಾರಪೇಟೆ-ಶಾಂತಳ್ಳಿ ರಾಜ್ಯಹೆದ್ದಾರಿಯ ಆಲೇಕಟ್ಟೆಯಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ 1.50 ಕೋಟಿ ರೂ., ವೆಚ್ಚದ ತಡೆಗೋಡೆ ಕಾಮಗಾರಿಗೆ ಶಾಸಕ ಡಾ.ಮಂತರ್‌ಗೌಡ ಮಂಗಳವಾರ ಚಾಲನೆ ನೀಡಿದರು.
ಆಲೇಕಟ್ಟೆ ಬಳಿ ರಾಜ್ಯ ಹೆದ್ದಾರಿ ಹಾಗು ಚೌಡ್ಲು ಗ್ರಾಮ ಪಂಚಾಯಿತಿಯ ಕೆಲವು ವಾರ್ಡ್‌ಗಳು ಮತ್ತು ಹಾನಗಲ್ಲು ಬಾಣೆ ಸಂಪರ್ಕ ರಸ್ತೆಗೆ ಹೊಂದಿಕೊಂಡಂತೆ ಈ ಹಿಂದೆ ನಿರ್ಮಿಸಿದ್ದ ತಡೆಗೋಡೆ, ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಕುಸಿದಿತ್ತು. ಇದರಿಂದಾಗಿ ರಸ್ತೆಯೂ ಸಹ ಕುಸಿಯುವ ಭೀತಿ ಎದುರಾಗಿತ್ತು. ಇದೀಗ ಸಣ್ಣ ನೀರಾವರಿ ಇಲಾಖೆಯಿಂದ 1.50 ಕೋಟಿ ರೂ, ಅನುದಾನ ಬಿಡುಗಡೆಯಾಗಿದ್ದು, ನಾಳೆಯಿಂದಲೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಶಾಸಕರು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಹಾಗು ಸಣ್ಣ ನೀರಾವರಿ ಇಲಾಖೆ ಸಚಿವರಾಗಿರುವ ಬೋಸರಾಜು ಅವರೊಂದಿಗೆ ಚರ್ಚೆ ನಡೆಸಿದ ಸಂದರ್ಭ ತಕ್ಷಣಕ್ಕೆ 1.50 ಕೋಟಿ ರೂ, ಅನುದಾನ ಬಿಡುಗಡೆಗೊಳಿಸಿದ್ದಾರೆ. ಈ ಪ್ರದೇಶವು ಎರಡು ಪ್ರಮುಖ ಸಂಪರ್ಕ ರಸ್ತೆಗಳ ಜಂಕ್ಷನ್ ಆಗಿದ್ದು, ಭೂಕುಸಿತದಿಂದ ರಸ್ತೆಯೂ ಕುಸಿಯುವ ಆತಂಕ ಎದುರಾಗಿತ್ತು. ಉಸ್ತುವಾರಿ ಸಚಿವರು ಅನುದಾನ ಒದಗಿಸಿದ್ದು, ಮಡಿಕೇರಿಯ ಹಳೆ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವಂತೆ ತಡೆಗೋಡೆ ನಿರ್ಮಾಣಗೊಳ್ಳಲಿದೆ ಎಂದರು.
ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಮಾಜಿ ಅಧ್ಯಕ್ಷ ಕೆ.ಎಂ.ಲೋಕೇಶ್, ಚೌಡ್ಲು ಗ್ರಾಮ ಪಂಚಾಯಿತಿ ಸದಸ್ಯ ಚೇತನ್, ಬ್ಲಾಕ್ ಕಾಂಗ್ರೆಸ್ ಖಜಾಂಚಿ ಚೇತನ್, ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯ ಡಿ.ಯು. ಕಿರಣ್, ಸ್ಥಳೀಯರಾದ ಸುಕುಮಾರ್, ಸುಜಿತ್, ಇಲಾಖೆ ಅಭಿಯಂತರ ಕುಮಾರಸ್ವಾಮಿ ಇತರರಿದ್ದರು.