ಚಿಕ್ಕಮಗಳೂರು: ಭದ್ರಾ ಮೇಲ್ದಂಡೆ ವಿಶೇಷ ಅಭಿವೃದ್ಧಿ ಯೋಜನೆಯಡಿ 11.70 ಕೋಟಿ ರೂ. ವೆಚ್ಚದಲ್ಲಿ ಮೂರು ಚೆಕ್‍ಡ್ಯಾಂ ನಿರ್ಮಿಸಲಾಗುವುದು ಎಂದು ಶಾಸಕ ಬೆಳ್ಳಿಪ್ರಕಾಶ್ ಹೇಳಿದರು.
ಕಡೂರು ತಾಲೂಕು ಸೂರಾಪುರ ಗ್ರಾಮ ಸಮೀಪ ವೇದಾ ನದಿಗೆ ನಿರ್ಮಾಣವಾಗುವ 3 ಕೋಟಿ ರೂ. ವೆಚ್ಚದ ಚೆಕ್‍ಡ್ಯಾಂ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, 2020-21ನೇ ಸಾಲಿನ ವಿಶೇಷ ಅಭಿವೃದ್ಧಿ ಯೋಜನೆಯಡಿ ಈಗಾಗಲೇ ಎರಡು ಚೆಕ್‍ಡ್ಯಾಂಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ ಎಂದರು. ಕುಪ್ಪಾಳು ಸಮೀಪ ಶೀಘ್ರದಲ್ಲೇ 2 ಕೋಟಿ ರೂ. ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಚಾಲನೆ ದೊರೆಯಲಿದೆ. ಜಿಗಣೇಹಳ್ಳಿ ಗ್ರಾಮ ಸಮೀಪದ ಚೆಕ್‍ಡ್ಯಾಂಗೆ ಈಗಾಗಲೇ ಅನುಮೋದನೆಗೆ ಕಳಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಕಾಮಗಾರಿ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
2500 ಸಾವಿರ ಕೋಟಿ ಲೀಟರ್ ಸಂಗ್ರಹ:
ಸೂರಾಪುರ ಗ್ರಾಮ ಸಮೀಪ ನಿರ್ಮಾಣವಾಗುವ ಚೆಕ್‍ಡ್ಯಾಂನಲ್ಲಿ ಎರಡೂವರೆ ಸಾವಿರ ಕೋಟಿ ಲೀಟರ್‍ನಷ್ಟು ನೀರು ಸಂಗ್ರಹವಾಗಲಿದ್ದು, ಇದರಿಂದ ಈ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗಿ ಬೋರ್‍ವೆಲ್‍ಗಳಿಗೆ ಮರುಜೀವ ಸಿಗಲಿದೆ. ಬೇಸಿಗೆಯಲ್ಲೂ ಜಾನುವಾರುಗಳಿಗೆ ಕುಡಿಯಲು ನೀರು ಸಿಗಲಿದೆ ಎಂದರು.
ಕ್ಷೇತ್ರದಲ್ಲಿ ಚೆಕ್‍ಡ್ಯಾಂಗಳ ನಿರ್ಮಾಣಕ್ಕಾಗಿಯೇ ಸುಮಾರು 35 ಕೋಟಿ ರೂ. ಅನುದಾನ ಮಂಜೂರಾಗಿದೆ. ಚೌಳಹಿರಿಯೂರು ಸಮೀಪ ದೊಡ್ಡ ಚೆಕ್ ಡ್ಯಾಂ ನಿರ್ಮಾಣವಾಗಲಿದೆ. ಇದರಿಂದ ಆ ಭಾಗದಲ್ಲಿ ನೀರು ಶೇಖರಣೆಯಾಗಿ ಅಂತರ್ಜಲ ಹೆಚ್ಚಾಗಿ ರೈತರಿಗೆ ಅನುಕೂಲವಾಗಲಿದೆ ಎಂದರು.
ಜಿಪಂ ಸದಸ್ಯ ಕೆ.ಆರ್.ಮಹೇಶ್ ಒಡೆಯರ್, ವೈ.ಮಲ್ಲಾಪುರ ಗ್ರಾಪಂ ಅಧ್ಯಕ್ಷ ದೊರೆಸ್ವಾಮಿ, ಬಿಜೆಪಿ ತಾಲೂಕು ಅಧ್ಯಕ್ಷ ಬಿ.ಪಿ.ದೇವಾನಂದ್, ಮುಖಂಡರಾದ ಎಚ್.ಉಮೇಶ್, ಶಾಮಿಯಾನ ಚಂದ್ರು, ಸಿದ್ದಪ್ಪ, ಚಿನ್ನು ದೇವರಾಜ್, ತಿಪ್ಪೇಶ್, ಸಿ.ಕೃಷ್ಣಮೂರ್ತಿ, ಮಲ್ಲಿದೇವಿಹಳ್ಳಿ ಸತೀಶ್, ಸುರೇಶ್, ಇಂಜಿನಿಯರ್ ಹರ್ಷ, ತ್ಯಾಗರಾಜ್ ಇತರರಿದ್ದರು.