ಆಲೂರು ದುದ್ದನಹಳ್ಳಿ ಗೇಟ್ ಬಳಿ ಹಾದುಹೋಗಿರುವ ಹೆದ್ದಾರಿ. 
ಜಿಲ್ಲೆ

ಹೆದ್ದಾರಿಗೆ ಅಂಡರ್ ಪಾಸ್ ನಿರ್ಮಿಸಿ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಕುಂದಾಣ: ಆಲೂರು ದುದ್ದನಹಳ್ಳಿ ಗ್ರಾಮಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ವಾಹನಗಳ ವೇಗದ ಸಂಚಾರದಿಂದ ಕಳೆದ ಹಲವು ವರ್ಷಗಳಿಂದ ಸರಣಿ ಅಪಘಾತ ಸಂಭವಿಸುತ್ತಿವೆ. ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಅಪಘಾತ ವಲಯದಲ್ಲಿ ಕೂಡಲೇ ಅಂಡರ್ ಪಾಸ್ ನಿರ್ಮಿಸುವಂತೆ ಗ್ರಾಮಸ್ಥರು ಒತ್ತಾಯಿಸಿದರು. ದೇವನಹಳ್ಳಿ ತಾಲೂಕಿನ ದುದ್ದನಹಳ್ಳಿ ಗ್ರಾಮದಲ್ಲಿ ತೆರಿಗೆ ವಸೂಲಾತಿ ಸಂಬಂಧ ಸೇರಿದ್ದ ವೇಳೆ ಕುಂದಾಣ ವ್ಯವಸಾಯ ಸೇವಾ ಸಹಕಾರ ಸಂಘದ ಮಾಜಿ ಅಧ್ಯಕ್ಷ ಮುನಿರಾಜು ಮಾತನಾಡಿ, ಗ್ರಾಮೀಣ ಭಾಗದಿಂದ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗಳ ಎರಡು ಬದಿಗಳಲ್ಲಿನ ಸರ್ವೀಸ್ ರಸ್ತೆಯಲ್ಲಿನ ಸಮಸ್ಯೆ ಹೆಚ್ಚಾಗಿದೆ. ಮಳೆಗಾಲದಲ್ಲಿ ಎತ್ತರದ ಪ್ರದೇಶದಿಂದ ಹರಿವ ನೀರು ರಸ್ತೆಗಳ ಮೇಲೆ ಹರಿಯುತ್ತದೆ. ಚರಂಡಿಗಳ ವ್ಯವಸ್ಥೆಯಿಲ್ಲದ ಕಾರಣ ಹಳ್ಳ-ಕೊಳ್ಳಗಳಲ್ಲೇ ದೀರ್ಘಾವಧಿ ನಿಲ್ಲುತ್ತದೆ. ಇದರಿಂದ ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗದ ಭೀತಿಯು ಎದುರಾಗುತ್ತಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಿಸಿ ಪರಿಹರಿಸಬೇಕು ಎಂದು ಮನವಿ ಮಾಡಿದರು. ಅದರೊಂದಿಗೆ ಸಾರಿಗೆ ಸೌಕರ್ಯಗಳು ಸಮರ್ಪಕವಾಗಿಲ್ಲ, ಆಲೂರು ದುದ್ದನಹಳ್ಳಿ ಗ್ರಾಪಂನಿಂದ ಜಿಲ್ಲಾಡಳಿತ ಕಛೇರಿಗೆ 2 ಕಿ.ಮೀ.ನಡೆದುಕೊಂಡು ಹೋಗವುದು ಕಷ್ಟಸಾದ್ಯವಾಗಿದೆ. ಬಸ್ ತಂಗುದಾಣದ ಬಳಿ ಸರ್ಕಾರಿ ಬಸ್ ನಿಲುಗಡೆ ಮಾಡುತ್ತಿಲ್ಲ. ಆದ್ದರಿಂದ ಕ್ಷೇತ್ರದ ಸಚಿವ ಕೆ.ಎಚ್.ಮುನಿಯಪ್ಪ ಅವರು ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ ಅಧಿಕಾರಿಗಳ ಜತೆ ತುರ್ತಾಗಿ ಚರ್ಚಿಸಿ ಗ್ರಾಮಸ್ಥರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಆಲೂರು ದುದ್ದನಹಳ್ಳಿ ಗ್ರಾಪಂ ಸದಸ್ಯ ರಘು, ಬೈರೇಗೌಡ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ್, ಮುನಿ ಶಾಮಪ್ಪ, ನಾಗರಾಜು, ಗಜೇಂದ್ರ, ಬಚ್ಚೇಗೌಡ, ಡಿ.ಎಸ್.ಮಂಜುನಾಥ್, ಮನೋಜ್, ಮುನಿರಾಜು ಇದ್ದರು.