ಜಿಲ್ಲೆ

ಕೊಳತೂರು ಗೇಟ್‌ನಲ್ಲಿ ಮೇಲ್ಸೇತುವೆ ನಿರ್ಮಿಸಿ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಹಳೆಯ ಯೋಜನೆಯಂತೆ ಕಾಮಗಾರಿ ಮಾಡಲು ಗ್ರಾಮಸ್ಥರ ಒತ್ತಾಯ - 30 ಗ್ರಾಮಗಳಿಗೆ ಅನುಕೂಲ- ಆರು ಕಿಲೋಮೀಟರ್ ಉಳಿತಾಯ

ಹೊಸಕೋಟೆ: ತಾಲೂಕಿನ ಕೊಳತೂರು ಗೇಟ್ ಮಾರ್ಗವಾಗಿ ಹಾದು ಹೋಗಿರುವ ಚೆನ್ನೈ ಎಕ್ಸ್‌ಪ್ರೆಸ್ ಹೈವೇ ಜಂಕ್ಷನ್ ಬಳಿ ಕೊಳತೂರಿಗೆ ತೆರಳಲು ಮೇಲ್ಸೇತುವೆ ನಿರ್ಮಿಸಿ ಅಂಡರ್ ಪಾಸ್ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬ ಒತ್ತಾಯ ಗ್ರಾಮಸ್ಥರಿಂದ ಕೇಳಿಬಂದಿದೆ.
2016ರಲ್ಲಿ ರಸ್ತೆ ನಿರ್ಮಾಣ ಮಾಡುವಾಗ ಭೂಮಿ ಪಡೆದು ಹಣ ಕೊಟ್ಟು ರಸ್ತೆ ನಿರ್ಮಾಣದ ಯೋಜನೆ ಸಿದ್ಧಪಡಿಸಿದ್ದರು. ಯೋಜನೆ ಪ್ರಕಾರ ಕೊಳತೂರು ಗ್ರಾಮಕ್ಕೆ ತೆರಳಲು ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಆದರೆ, ಇದೀಗ ಯೋಜನೆಯನ್ನು ಅಧಿಕಾರಿಗಳು ತಿರುಚಿ, ಕೊಳತೂರು ಗೇಟ್ ಬಳಿ ತಿರುವು ಪಡೆಯುವ ರಸ್ತೆಯನ್ನು ಮುಚ್ಚುವುದು ಹಾಗೂ ಕೊಳತೂರು ಗ್ರಾಮಕ್ಕೆ ಬರುವ ವಾಹನಗಳು ರಾಷ್ಟ್ರೀಯ ಹೆದ್ದಾರಿ 75ರ ಹಲಸಹಳ್ಳಿ ಗೇಟ್ ಬಳಿ ಯು ಟರ್ನ್ ಪಡೆದು ವಾಪಾಸ್ ಬಂದು ಕೊಳತೂರು ಪ್ರವೇಶವಾಗುವಂತೆ ಯೋಜನೆ ಸಿದ್ಧಪಡಿಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.


ಹಾಗಾಗಿ ಅವೈಜ್ಞಾನಿಕ ಯೋಜನೆ ಕೈ ಬಿಟ್ಟು 2016ರಲ್ಲಿ ಮಾಡಿದ ಯೋಜನೆಯಂತೆಯೇ ರಸ್ತೆ ನಿರ್ಮಾಣ ಮಾಡಿ ಹತ್ತಾರು ಗ್ರಾಮದ ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮುಖಂಡ ಬಸವರಾಜ್ ಆಗ್ರಹಿಸಿದರು.
ತಾಪಂ ಮಾಜಿ ಅಧ್ಯಕ್ಷ ವಿ.ಸಿ.ಜಯದೇವಯ್ಯ ಮಾತನಾಡಿ, ಕೊಳತೂರು ಗೇಟ್ ಬಳಿ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡುವುದರಿಂದ ಕೊಳತೂರು ಗೇಟ್ ಮಾರ್ಗ 30 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸಾವಿರಾರು ಜನರಿಗೆ ತೊಂದರೆ ಆಗುತ್ತದೆ. ಹಾಗಾಗಿ ಜನರ ವಿರೋಧದ ನಡುವೆ ರಸ್ತೆ ನಿರ್ಮಾಣ ಮಾಡಲು ಮುಂದಾದರೆ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ,
ತಾಪಂ ಮಾಜಿ ಅಧ್ಯಕ್ಷ ಓರೋಹಳ್ಳಿ ಜಯಣ್ಣ, ಗ್ರಾಮದ ಮುಖಂಡರಾದ ರಮೇಶ್, ಎಂ.ಬಸವರಾಜು, ಮುನಿರಾಜು, ಕೆ.ಎಚ್.ಸುರೇಶ್, ರವಿ, ಸೋಲೂರು ಮುನಿಯಪ್ಪ, ಮುನೇಗೌಡ, ಅಶ್ವತ್ಥ್, ಬೈರೇಗೌಡ, ಭಾಸ್ಕರ್, ಪಟೇಲ್ ಶ್ರೀನಿವಾಸ್, ಶುಬ್ರಾಯಪ್ಪ, ಪ್ರವೀಣ್, ಸುನೀಲ್ ಇದ್ದರು.


"ಬೆಂಗಳೂರಿನಿಂದ ಕೋಲಾರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75 ಅನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವ ಹಿನ್ನೆಲೆಯಲ್ಲಿ ಹೊಸಕೋಟೆ ಕೆಇಬಿ ವೃತ್ತ ಗೌತಮ್ ಕಾಲನಿ ಬಳಿ ನಿತ್ಯ ಸಂಚಾರ ಸಮಸ್ಯೆ ಜತೆಗೆ ರಸ್ತೆ ದಾಟುವ ನಾಗರಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲಿ ರಸ್ತೆ ನಿರ್ಮಾಣದ ವೇಳೆ ಮೇಲ್ಸೇತುವೆ ನಿರ್ಮಾಣ ಮಾಡಿದರೆ ನಗರಕ್ಕೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಹಾಗಾಗಿ ನಗರದಲ್ಲಿ ಆದ ಸಮಸ್ಯೆಯೇ ಕೊಳತೂರು ಗೇಟ್ ಬಳಿ ಆಗುವುದು ಬೇಡ."
ಮುನಿರಾಜು ಹಿರಿಯ ಮುಖಂಡ


ತಾಯಿ-ಮಕ್ಕಳ ಆಸ್ಪತ್ರೆಗೂ ತೊಂದರೆ
ಕೊಳತೂರು ಬಳಿ ನೂರು ಹಾಸಿಗೆ ಸಾಮರ್ಥ್ಯದ ತಾಯಿ-ಮಗು ಆಸ್ಪತ್ರೆ ನಿರ್ಮಾಣ ಹಂತದಲ್ಲಿದ್ದು, ಅಲ್ಲೇ ಖಾಲಿ ಇರುವ ಜಾಗದಲ್ಲಿ ತಾಲೂಕು ಆಸ್ಪತ್ರೆ ನಿರ್ಮಾಣ ಮಾಡುವ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಆಸ್ಪತ್ರೆಗಳು ಪ್ರಾರಂಭವಾದ ನಂತರ ಆಸ್ಪತ್ರೆಗೆ ತೆರಳುವ ಸಾವಿರಾರು ರೋಗಿಗಳಿಗೂ ಸಹ ಈ ರಸ್ತೆ ಸಮಸ್ಯೆ ಬಿಸಿ ತಟ್ಟಲಿದೆ. ಹೀಗಾಗಿ ಮೇಲ್ಸೇತುವೆ ನಿರ್ಮಿಸಿ ಅಂಡರ್ ಪಾಸ್ ನಿರ್ಮಾಣ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಗ್ರಾಮದ ಮುಖಂಡ ಲಕ್ಷ್ಮಣಮೂರ್ತಿ ಒತ್ತಾಯಿಸಿದರು.


ಬಾರದ ಸಂಸದರು, ಸೆ.17ಕ್ಕೆ ಭೇಟಿ ನಿಗದಿ
ಕೊಳತೂರು ನಾಗರಿಕರ ಸಮಸ್ಯೆ ಆಲಿಸುವ ವಿಚಾರವಾಗಿ ಸಂಸದ ಡಾ.ಕೆ ಸುಧಾಕರ್ ಅವರು ಶುಕ್ರವಾರ ಸಂಜೆ ನಾಲ್ಕು ಗಂಟೆಗೆ ಬರುವುದಾಗಿ ತಿಳಿಸಿದ್ದರು. ಆದರೆ ಅಂತಿಮವಾಗಿ ಸಂಸದರ ಪ್ರವಾಸ ರದ್ದಾದರಿಂದ ಸೆ.17ಕ್ಕೆ ಆಗಮಿಸಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸುವ ಭರವಸೆ ನೀಡಿದ ಸ್ಥಳದಲ್ಲಿ ಜಮಾಯಿಸಿದ್ದ ನಾಗರಿಕರು ವಾಪಸ್ ತೆರಳಿದರು.