ಜಿಲ್ಲೆ

ಧರ್ಮಾ ಕಾಲುವೆಗೆ ಕಾಂಕ್ರೀಟ್ ಸುರಂಗ ಮಾರ್ಗ ನಿರ್ವಿುಸಿ

ಹಾನಗಲ್ಲ: ತಾಲೂಕಿನ ಹೀರೂರ ಸಮೀಪದಲ್ಲಿ ಧರ್ಮಾ ಕಾಲುವೆಯ ನಾಲ್ಕರ ಪೈಕಿ ಮೂರು ಸೈಫಾನ್​ಗಳಲ್ಲಿ (ನೀರು ಹರಿಯುವ ಸುರಂಗ ಮಾರ್ಗ) ಹೂಳು ತುಂಬಿರುವುದರಿಂದ ನೀರು ಜಮೀನುಗಳಲ್ಲಿ ನಿಂತು ಹಾನಿಯಾಗುತ್ತಿದೆ ಎಂದು ರೈತರು ಬೃಹತ್ ನೀರಾವರಿ ಇಲಾಖೆ ಇಇ ಬಸವರಾಜ ಬನ್ನೂರ ಅವರ ಗಮನಕ್ಕೆ ತಂದರು.

ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ, ನೀರಾವರಿ ಇಲಾಖೆಯ ಅಧಿಕಾರಿಗಳು ರೈತ ಸಂಘದ ಪದಾಧಿಕಾರಿಗಳೊಂದಿಗೆ ಹೀರೂರ ಇನಾಂಯಲ್ಲಾಪುರ ಹಾಗೂ ಕಲ್ಲಾಪುರ ಗ್ರಾಮಗಳ ಧರ್ಮಾ ಕಾಲುವೆ ಸಮಸ್ಯೆಗಳನ್ನು ಶುಕ್ರವಾರ ಪರಿಶೀಲನೆ ಕೈಗೊಂಡರು.

ಈ ಕುರಿತು ಅಧಿಕಾರಿಗಳೊಂದಿಗೆ ರ್ಚಚಿಸಿದ ರೈತ ಮುಖಂಡ ಸೋಮಣ್ಣ ಜಡೆಗೊಂಡರ, ಕಾಲುವೆಯ 4 ಸೈಫಾನ್​ಗಳ ಪೈಕಿ 3ರಲ್ಲಿ ಕಲ್ಲು ಮಣ್ಣುಗಳಿಂದ ತುಂಬಿ ನೀರು ಸರಿಯಾಗಿ ಹರಿಯುತ್ತಿಲ್ಲ. ಇದರಿಂದಾಗಿ ಪ್ರತಿವರ್ಷ ಕಾಲುವೆ ಮೇಲ್ಭಾಗದ ಹೊಲಗಳಲ್ಲಿ ನೀರು ನಿಂತು ಅಡಕೆ ತೋಟ, ಸುಮಾರು 200 ಎಕರೆ ಪ್ರದೇಶದ ಭತ್ತದ ಬೆಳೆ ಹಾಳಾಗುತ್ತಿದೆ. ಸೈಫಾನ್​ಗಳ ಮೂರು ಅಡಿಗಳ ಪೈಪ್ ಬದಲಿಸಿ ದೊಡ್ಡ ಕಾಂಕ್ರೀಟ್ ಸುರಂಗ ಮಾರ್ಗ ನಿರ್ವಿುಸಬೇಕು ಎಂದು ಒತ್ತಾಯಿಸಿದರು.

ಏತ ನೀರಾವರಿ ಎಇಇ ಶಿವಮೂರ್ತಿ ಪ್ರತಿಕ್ರಿಯಿಸಿ, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಮೂರು ಸೈಫಾನ್​ಗಳಲ್ಲಿರುವ ಪೈಪ್ ತೆರವುಗೊಳಿಸಿ, ಕಾಂಕ್ರೀಟ್ ಕಾಲುವೆ ನಿರ್ವಿುಸಬೇಕಾಗುತ್ತದೆ. ಇದಕ್ಕಾಗಿ ಒಟ್ಟು 1.59 ಕೋಟಿ ರೂಪಾಯಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಮಂಜೂರಾಗದ್ದರಿಂದ ಕಾಮಗಾರಿ ವಿಳಂಬವಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ತಹಸೀಲ್ದಾರ್ ಪಿ.ಎಸ್. ಎರ್ರಿಸ್ವಾಮಿ, ಕಾಲುವೆಯಲ್ಲಿ ನೀರು ಕಡಿಮೆಯಾದ ನಂತರ, ಸೈಫಾನ್​ನ ಕೊನೆಯ 5 ಅಡಿ ಭಾಗ ಮಾತ್ರ ತೆರವುಗೊಳಿಸಿ ತಾತ್ಕಾಲಿಕ ಪರಿಹಾರ ಒದಗಿಸಬೇಕು. ಮಳೆಗಾಲದ ನಂತರ ಆಯಾ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳು ಉದ್ಯೋಗ ಖಾತ್ರಿ ಯೋಜನೆಯಡಿ ಕಾಲುವೆಯಲ್ಲಿನ ಗಿಡಗಂಟಿಗಳ ತೆರವುಗೊಳಿಸಬೇಕು ಎಂದು ಸಲಹೆ ನೀಡಿದರು.

ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ, ಕಾಲುವೆ ಹೂಳು ತೆರವಿಗೆ ಆಯಾ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳು ಪ್ರತ್ಯೇಕ ಕ್ರಿಯಾ ಯೋಜನೆ ರೂಪಿಸಲು ತಾಲೂಕು ಪಂಚಾಯಿತಿ ಇಒ ಆದೇಶ ಮಾಡಬೇಕು ಎಂದು ಮನವಿ ಮಾಡಿದರು.

ಇನಾಂಯಲ್ಲಾಪುರ ಗ್ರಾಮದ ಎರ್ರಿಕಟ್ಟಿ ಹಾಗೂ ಯತ್ನಳ್ಳಿ ಗ್ರಾಮದ ಕೆರೆಯ ಕೋಡಿಗಳ ಸಮಸ್ಯೆಯಿಂದಾಗಿ ಕೆರೆಗಳ ಹಿನ್ನೀರು ಹೊಲಗಳಿಗೆ ನುಗ್ಗಿ 50 ಎಕರೆಗಳಷ್ಟು ಫಸಲು ಹಾಳು ಮಾಡುತ್ತಿವೆ. ಈ ಕೆರೆಗಳಿಗೆ ಧರ್ವ ಕಾಲುವೆ ನೀರು ಹರಿಯುವುದರಿಂದ ಮಳೆಗಾಲದಲ್ಲಿ ಫಸಲು ಹಾಳಾಗುತ್ತಿದೆ. ಈ ಕೆರೆಗಳ ಸರ್ವೆ ಮಾಡಿಸಿ ಕೋಡಿಯನ್ನು ವೈಜ್ಞಾನಿಕವಾಗಿ ನಿರ್ವಿುಸಬೇಕು ಎಂದು ರೈತ ಸಂಘದ ಕಾರ್ಯದರ್ಶಿ ರುದ್ರಪ್ಪ ಹಣ್ಣಿ ನೀರಾವರಿ ಅಧಿಕಾರಿಗಳಿಗೆ ಆಗ್ರಹಿಸಿದರು.

ಏತ ನೀರಾವರಿ ಇಲಾಖೆ ಜೆಇ ಜಾವೇದ ಮುಲ್ಲಾ, ರೈತ ಮುಖಂಡರಾದ ಷಣ್ಮುಖಪ್ಪ ಅಂದಲಗಿ, ಜಗದೀಶ ಕೋಣನವರ, ನಾಗನಗೌಡ ಆಲಳ್ಳಿ, ಮಕ್ಬುಲ್​ಸಾಬ್ ಹಂಚಿನಮನಿ, ಅಕ್ಬರಸಾಬ್ ಶೇಷಗಿರಿ, ಮಕ್ಬುಲ್​ಅಹ್ಮದ್ ಸರಖಾಜಿ, ರಾಘವೇಂದ್ರ ತಳವಾರ, ಈರಪ್ಪ ಅಂಬಲೇರ, ಮಹೇಶ ವಾಸನದ, ಲೋಕೇಶ ಹುಲಿ, ವಿಜಯೇಂದ್ರ ಮಡಿವಾಳರ, ಸೋಮಣ್ಣ ಅಗಸನಹಳ್ಳಿ, ಮಂಜುನಾಥ ಗುಡ್ಡೇರ, ಚನಬಸನಗೌಡ ಬನ್ನಳ್ಳಿ, ಮಲಕಪ್ಪ ಸೋಮಸಾಗರ, ಶಿವಕುಮಾರ ಹಣ್ಣಿ, ಅಣ್ಣಪ್ಪ ಹುಲಿ, ಮಾಲತೇಶ ಅಗಸನಹಳ್ಳಿ ಇತರರಿದ್ದರು.

ಧರ್ಮಾ ಕಾಲುವೆಯ ಸೈಫಾನ್​ಗಳ ದುರಸ್ತಿ ಕುರಿತು ಇಲಾಖೆ ಮೇಲಧಿಕಾರಿಗಳ ಗಮನ ಸೆಳೆದು ಶೀಘ್ರದಲ್ಲಿ ಕಾಮಗಾರಿ ಕೈಗೊಳ್ಳಲು ಅನುದಾನ ಬಿಡುಗಡೆಗೊಳಿಸಬೇಕು ಎಂದು ಮನವಿ ಮಾಡಲಾಗುವುದು. ಇಲ್ಲಿನ ರೈತರಿಗಾಗುತ್ತಿರುವ ಬೆಳೆ ಹಾನಿ ಮನವರಿಕೆ ಮಾಡಿಕೊಡಲಾಗುವುದು.| ಬಸವರಾಜ ಬನ್ನೂರ, ಇಇ ಯುಟಿಪಿ ರಾಣೆಬೆನ್ನೂರ